ಕೊಪ್ಪಳದ ಸಮೂಹ ಸಾಮಾರ್ಥ್ಯದಲ್ಲಿ ಆಯೋಜಿಸಿದ್ದ ಮೂರು ದಿನಗಳ ನಾವು ಮತ್ತು ಸಮಾಜ ಯುವಜನರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರವನ್ನು ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​. ದರಗದ ಉದ್ಘಾಟಿಸಿದರು. ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯೆ ಸರೋಜಾ ಬಾಕಳೆ, ಅಲ್ಫಾ ಫೌಂಡೇಶನ್​ ಮುಖ್ಯಸ್ಥೆ ಸಲೀಮಾ ಜಾನ್​, ವಿಕಾಸ ಸೇವಾ ಟ್ರಸ್ಟ್​ ಅಧ್ಯಕ್ಷ ಸುಭಾನ್​, ಸಂಭ್ರಮ ಸಂಸ್ಥೆಯ ಶಂಕರ್​, ಐಎಸ್​ಐ ಸಂಯೋಜಕ ವಸಂತ ಇದ್ದರು. 
ಕೊಪ್ಪಳ

ಯುವಜನರಲ್ಲಿ ಸಾಮಾಜಿಕ ಜವಾಬ್ದಾರಿ ಬೆಳೆಸಲು ತರಬೇತಿ ಅಗತ್ಯ

ಪ್ರಮುಖ ಮುಖ್ಯಾಂಶಗಳು

  • ನ್ಯಾಯಾಧೀಶ ಮಹಾಂತೇಶ ದರಗದ
ಕೊಪ್ಪಳ : ಯುವಜನರು ಸಮಾಜದ ಬಗ್ಗೆ ಜವಾಬ್ದಾರಿಯುತ ಮನೋಭಾವ ಬೆಳೆಸಿಕೊಂಡು ಶಿಕ್ಷಣ, ಸಂಘಟನೆ ಮತ್ತು ಸಾಮಾಜಿಕ ಮೌಲ್ಯಗಳ ಮೂಲಕ ಉತ್ತಮ ಸಮಾಜ ನಿಮಾರ್ಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​. ದರಗದ ಹೇಳಿದರು.
ನಗರದ ಸಮೂಹ ಸಾಮಾರ್ಥ್ಯದಲ್ಲಿ ಶುಕ್ರವಾರ ಆಯೋಜಿಸಿದ್ದ ಮೂರು ದಿನಗಳ ನಾವು ಮತ್ತು ಸಮಾಜ ಯುವಜನರ ಸಾಮರ್ಥ್ಯ ಅಭಿವೃದ್ಧಿ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಹಣ ಮತ್ತು ಅಧಿಕಾರದ ವ್ಯಾಮೋಹದಿಂದ ಸಮಾಜದಲ್ಲಿ ಮಾನವೀಯ ಮೌಲ್ಯಗಳು ಕುಸಿಯುತ್ತಿವೆ. ಪ್ರೀತಿ, ವಿಶ್ವಾಸ ಹಾಗೂ ಉತ್ತಮ ಸಂಬಂಧಗಳನ್ನು ಬೆಳೆಸಿಕೊಳ್ಳುವುದು ಯುವಜನರ ಕರ್ತವ್ಯವಾಗಿದೆ. ಶಿಕ್ಷಣ ಎಂದರೆ ಅಕ್ಷರಜ್ಞಾನ ಮಾತ್ರವಲ್ಲ, ವಿಜ್ಞಾನ, ಕಾನೂನು ಹಾಗೂ ಸಾಮಾಜಿಕ ಅರಿವನ್ನೂ ಒಳಗೊಂಡಿರಬೇಕು. ಡಾ. ಬಿ.ಆರ್​. ಅಂಬೇಡ್ಕರ್​ ಅವರ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಸಮಾಜ ನಿಮಾರ್ಣಕ್ಕೆ ಯುವಕರು ಮುಂದಾಗಬೇಕು ಎಂದು ತಿಳಿಸಿದರು.
ಮಕ್ಕಳ ಕಲ್ಯಾಣ ಸಮಿತಿಯ ಮಾಜಿ ಸದಸ್ಯೆ ಸರೋಜಾ ಬಾಕಳೆ ಮಾತನಾಡಿ, ಇಂದಿನ ಯುವಜನರಿಗೆ ಶಿಕ್ಷಣದ ಅನೇಕ ಅವಕಾಶಗಳಿದ್ದರೂ ಮಕ್ಕಳು ಇನ್ನೂ ಶೋಷಣೆಗೆ ಒಳಗಾಗುತ್ತಿರುವುದು ವಿಷಾದನೀಯ. ಮಕ್ಕಳ ರಕ್ಷಣೆಗೆ ಇರುವ ಕಾನೂನು ಹಾಗೂ ವ್ಯವಸ್ಥೆಗಳ ಬಗ್ಗೆ ಯುವಜನರು ಅರಿವು ಹೊಂದಬೇಕು ಎಂದರು. ಸಂಪನ್ಮೂಲ ವ್ಯಕ್ತಿ ಧರ್ಮರಾಜ ಗೋನಾಳ ಮೊದಲ ದಿನದ ಅಧಿವೇಶನ ನಡೆಸಿಕೊಟ್ಟರು.
ಅಲ್ಫಾ ಫೌಂಡೇಶನ್​ ಮುಖ್ಯಸ್ಥೆ ಸಲೀಮಾ ಜಾನ್​, ವಿಕಾಸ ಸೇವಾ ಟ್ರಸ್ಟ್​ ಅಧ್ಯಕ್ಷ ಸುಭಾನ್​, ಸಂಭ್ರಮ ಸಂಸ್ಥೆಯ ಶಂಕರ್​, ಐಎಸ್​ಐ ಸಂಯೋಜಕ ವಸಂತ, ಶಂಕರ್​, ಸುಭಾನ್​, ಸಲೀಮಾ ಜಾನ್​ ಇತರರಿದ್ದರು.