ಹಿಟ್ನಾಳ-ಮುನಿರಾಬಾದ್-ಗಿಣಗೇರಾ ಮಾರ್ಗದ ಎಲ್‌ಸಿ ಸಂಖ್ಯೆ 77ರ ರೈಲ್ವೆ ಮೇಲ್ಸೇತುವೆ ಕಾಮಗಾರಿ ವಿಳಂಬ ದಿಂದ ಹಿಟ್ನಾಳ ರೈಲ್ವೆ ಗೇಟ್‌ನ ಸಮಸ್ಯೆಯಿಂದ ಗಂಟೆಗಟ್ಟಲೆ ವಾಹನ ಸವಾರರು ನಿಂತಿರುವುದು.
- ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವ ಸ್ಥಿತಿ
- ಆಮೆಗತಿಯಲ್ಲಿ ಸಾಗಿದ ಮೇಲ್ಸೇತುವೆ ಕಾಮಗಾರಿ
ಮುನಿರಾಬಾದ್: ಸಮೀಪದ ಹಿಟ್ನಾಳ ರೈಲ್ವೆ ಗೇಟ್ ಬಳಿ ತೀವ್ರ ಸಂಚಾರ ದಟ್ಟಣೆಯಿಂದ ಸಾರ್ವಜನಿಕರು, ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.
ರೈಲು ಸಂಚಾರದ ಸಮಯದಲ್ಲಿ ಗೇಟ್ ಮುಚ್ಚಿದಾಗ ರಸ್ತೆಯ ಎರಡೂ ಬದಿ ವಾಹನಗಳು ಸಾಲುಗಟ್ಟಿ ನಿಲ್ಲುವುದು ಸಾಮಾನ್ಯವಾಗಿದೆ. ಇದರಿಂದ ಕಚೇರಿಗೆ ತೆರಳುವ ಉದ್ಯೋಗಿಗಳು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಂಟೆಗಟ್ಟಲೆ ರಸ್ತೆಯಲ್ಲೇ ಕಾಯುವಂತಾಗಿದೆ.
ಗೇಟ್ ತೆರೆದ ನಂತರವೂ ವಾಹನಗಳ ದಟ್ಟಣೆಯಿಂದ ಸುಗಮ ಸಂಚಾರಕ್ಕೆ ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಆಂಬುಲೆನ್ಸ್‌ಗಳು ಹಾಗೂ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳನ್ನು ಸಾಗಿಸುವ ವಾಹನಗಳು ರಸ್ತೆಯಲ್ಲೇ ಸಿಲುಕಿಕೊಳ್ಳುತ್ತಿವೆ. ಸೂಕ್ತ ಸಮಯಕ್ಕೆ ಆಸ್ಪತ್ರೆ ತಲುಪಲಾಗದೇ ರೋಗಿಗಳ ಪ್ರಾಣಕ್ಕೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ.
ಆಮೆಗತಿಯಲ್ಲಿ ಸಾಗಿದ ಮೇಲ್ಸೇತುವೆ ಕಾಮಗಾರಿ: ಹಿಟ್ನಾಳ-ಮುನಿರಾಬಾದ್-ಗಿಣಗೇರಾ ಮಾರ್ಗದ ಎಲ್‌ಸಿ ಸಂಖ್ಯೆ 77ರ ಬದಲಾಗಿ ಸುಮಾರು 27 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ರಸ್ತೆ ಮೇಲ್ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪ್ರಸಿದ್ಧ ಪ್ರವಾಸಿ ತಾಣ ಅಂಜನಾದ್ರಿ ಮತ್ತು ಹುಲಿಗಿಯ ಶ್ರೀ ಹುಲಿಗೆಮ್ಮ ದೇವಸ್ಥಾನಕ್ಕೆ ಬರುವ ಭಕ್ತರು ಹಾಗೂ ಪ್ರವಾಸಿಗರು ಇದೇ ಮಾರ್ಗವಾಗಿ ಸಂಚರಿಸುವುದರಿಂದ ದಟ್ಟಣೆ ಹೆಚ್ಚಾಗುತ್ತಿದೆ.
ರೈಲ್ವೆ ಇಲಾಖೆ ಮತ್ತು ಜಿಲ್ಲಾಡಳಿತ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.