ಕೊಪ್ಪಳದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಸಂಸದ ರಾಜಶೇಖರ ಹಿಟ್ನಾಳ ಮಾಹಿತಿ ನೀಡಿದರು. ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಶ್ರೀನಿವಾಸ ಗುಪ್ತ, ಶಿವರಾತ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಅನಿಲ ನಲವಾಡ ಇದ್ದರು.
ಕೊಪ್ಪಳ : ನಗರದ ಮಿನಿ ಕೇದರನಾಥ ಎಂದೇ ಖ್ಯಾತಿಯಾಗಿರುವ ಹುಲಿಕೇರಿ ಸಮೀಪದ ಶಿವರಾತ್ರೇಶ್ವರ ದೇವಸ್ಥಾನದಲ್ಲಿ ಫೆ.15 ರಂದು ಸಂಜೆ 6 ಗಂಟೆಗೆ ಶಿವರಾತ್ರಿ ಉತ್ಸವ--&2026 ಅದ್ದೂರಿಯಾಗಿ ಜರುಗಲಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ಶಿವರಾತ್ರೇಶ್ವರ ದೇವಸ್ಥಾನ ಸಮಿತಿಯ ವತಿಯಿಂದ ಆಯೋಜಿಸಲಾಗಿರುವ ಈ ಕಾರ್ಯಕ್ರಮದಲ್ಲಿ ಧಾರ್ಮಿಕ ಮತ್ತು ಸಾಂಸತಿಕ ಲೋಕದ ದಿಗ್ಗಜರು ಪಾಲ್ಗೊಳ್ಳಲಿದ್ದಾರೆ. ಗವಿಸಿದ್ದೇಶ್ವರ ಮಹಾಸ್ವಾಮಿಗಳ ದಿವ್ಯ ಆಶೀರ್ವಚನದೊಂದಿಗೆ ಆರಂಭವಾಗಲಿದೆ. ಈ ಬಾರಿ ಉತ್ಸವದಲ್ಲಿ ರಾಜ್ಯದ ಖ್ಯಾತ ಕಲಾವಿದರಿಂದ ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಖ್ಯಾತ ಚಲನಚಿತ್ರ ಗಾಯಕಿ ಇಂದು ನಾಗರಾಜ್ ಮತ್ತು ತಂಡದೊಂದಿಗೆ ಜೀ ಕನ್ನಡ ಸರಿಗಮಪ ಖ್ಯಾತಿಯ ಮನೋಜಮ್ ಹಾಗೂ ದರ್ಶನ್ ಅವರು ಗಾಯನ ಸುಧೆ ಹರಿಸಲಿದ್ದಾರೆ. ಕಾರ್ಯಕ್ರಮದ ನಿರೂಪಣೆಯನ್ನು ಹೇಮಲತಾ ನಡೆಸಿಕೊಡಲಿದ್ದಾರೆ. ಹಾಗೂ ಶ್ರೀರಾಮ್ ಕಾಸರ್, ನಯನಾ ನಾಗರಾಜ್, ಮಂಜುನಾಥ ಮತ್ತು ಸೌಮ್ಯ ತಂಡದಿಂದ ಗಾಯನ ಕಾರ್ಯಕ್ರಮವಿರಲಿದ್ದು, ಗೌರಿ ನಿರೂಪಣೆ ಮಾಡಲಿದ್ದಾರೆ ಎಂದು ತಿಳಿಸಿದರು.
ಡಿಕೆಡಿ ವಿಜೇತರಾದ ಬೃಂದಾ ಮತ್ತು ದರ್ಶನ ತಂಡದಿಂದ ಆಕರ್ಷಕ ನೃತ್ಯ ಹಾಗೂ ಹೊಸಪೇಟೆಯ ಭರತನಾಟ್ಯ ಅಂಜಲಿ ತಂಡದಿಂದ ಶಾಸ್ತ್ರೀಯ ನೃತ್ಯ ಪ್ರದರ್ಶನಗೊಳ್ಳಲಿದೆ. ಖ್ಯಾತ ಹಾಸ್ಯ ಕಲಾವಿದ ಶರಣು ನಾಗನೂರ ನವಲಗುಂದ ಅವರು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಲಿದ್ದಾರೆ. ಅಲ್ಲದೇ ಕೊಪ್ಪಳದ ಮಿಟ್ಟಿಕೇರಿಯ ಶ್ರೀ ಮಾರುತೇಶ್ವರ ಭಜನಾ ಸಂಘದಿಂದ ಭಜನಾ ಕಾರ್ಯಕ್ರಮ ಜರುಗಲಿದೆ. ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಮೂಡಿಸುವ ಮದ್ದು ಸುಡುವ ಕಾರ್ಯಕ್ರಮ ಎಂದು ಹೇಳಿದರು.
ಉತ್ಸವಕ್ಕೆ ಬರುವ ಎಲ್ಲಾ ಭಕ್ತಾಧಿಗಳಿಗೆ ಮತ್ತು ಸಾರ್ವಜನಿಕರಿಗೆ ಸಮಿತಿಯ ವತಿಯಿಂದ ಫಲಹಾರ ಹಾಗೂ ಅಲ್ಪೋಪಹಾರದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮ ಅಂದು ಸಂಜೆ 6 ಗಂಟೆಯಿಂದ ಆರಂಭವಾಗಲಿದ್ದು, ಜಿಲ್ಲೆಯ ಜನತೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಸಾಂಸತಿಕ ವೈಭವವನ್ನು ಕಣ್ತುಂಬಿಕೊಳ್ಳಬೇಕೆಂದು ಮನವಿ ಮಾಡಿದರು.
ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಷನ್ ಉಪಾಧ್ಯಕ್ಷ ಶ್ರೀನಿವಾಸ ಗುಪ್ತ, ಶಿವರಾತ್ರೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಅನಿಲ ನಲವಾಡ ಸುದ್ದಿ ಗೋಷ್ಠಿಯಲ್ಲಿದ್ದರು.