- ಡಿಸಿ ಡಾ.ಸುರೇಶ ಇಟ್ನಾಳ ಸಮರ್ಥನೆ
- ಗೊಂದಲ ಸೃಷ್ಟಿಸಿದಲ್ಲಿ ಕ್ರಮದ ಎಚ್ಚರಿಕೆ
ಕೊಪ್ಪಳ: ಜಿಲ್ಲೆಯಲ್ಲಿ ಅಡುಗೆ ಅನಿಲ ಹಾಗೂ ಪೆಟ್ರೋಲ್, ಡಿಸೇಲ್ ಕೊರತೆ ಇಲ್ಲ. ಅನಗತ್ಯ ಗೊಂದಲ ಸೃಷ್ಟಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಎಚ್ಚರಿಕೆ ನೀಡಿದರು.
ಗೃಹ ಬಳಕೆ ಸಿಲಿಂಡರ್ ಕೊರತೆ ಇಲ್ಲ. ಹಾಸ್ಟೆಲ್, ಆಸ್ಪತ್ರೆ, ಅಕ್ಷರ ದಾಸೋಹ ಯೋಜನೆ ಜಾರಿ ಇರುವ ಶಾಲೆಗಳು, ಇಂದಿರಾ ಕ್ಯಾಂಟೀನ್ಗಳಿಗೆ ಆಸ್ಯತೆ ಮೇರೆಗೆ ಸಿಲಿಂಡರ್ ಪುರೈಸಲಾಗುತ್ತಿದೆ. ಆದರೆ, ಜನರು ಅನಗತ್ಯ ಗೊಂದಲ ಮಾಡಿಕೊಳ್ಳುತ್ತಿದ್ದಾರೆ. ಬಿಪಿಸಿ 11, ಐಒಸಿ 6 ಹಾಗೂ ಎಚ್ಪಿಸಿಯ 7 ಗ್ಯಾಸ್ ಏಜೆನ್ಸಿಗಳು ಸಕ್ರಿಯವಾಗಿವೆ. ಏಕ ಸಿಲಿಂಡರ್ ಹೊಂದಿದವರು 25 ದಿನಕ್ಕೆ ಒಂದು, ಎರಡು ಸಿಲಿಂಡರ್ ಹೊಂದಿದವರು 35 ದಿನ, ಉಜ್ವಲ ಯೋಜನೆ ಹೊಂದಿದವರು 45 ದಿನಕ್ಕೆ ಒಂದು ಸಿಲಿಂಡರ್ ಪಡೆಯಬೇಕು. ಜಿಲ್ಲೆಯಲ್ಲಿ 3,79,839 ಗೃಹ ಬಳಕೆ, 4,229 ವಾಣಿಜ್ಯ ಬಳಕೆ ಸಿಲಿಂಡರ್ ಸಂಪರ್ಕಗಳಿವೆ. ಕೆಲವರು ಗೃಹ ಬಳಕೆ ಸಿಲಿಂಡರ್ ವಾಣಿಜ್ಯ ಬಳಕೆಗೆ ಬಳಸುತ್ತಿದ್ದು, 45 ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 167 ಪೆಟ್ರೋಲ್ ಬಂಕ್ಗಳಿವೆ. ನಿತ್ಯ 159 ಕಿಲೋ ಲೀಟರ್ ಪೆಟ್ರೋಲ್, 470 ಕಿ.ಲೀ. ಡಿಸೇಲ್ ಬಳಕೆಯಾಗುತ್ತಿದೆ. ತಿಂಗಳಿಗೆ 4,936 ಕಿ.ಲೀ. ಪೆಟ್ರೋಲ್, 14,113 ಕಿ.ಲೀ. ಡಿಸೇಲ್ ಬೇಡಿಕೆ ಇದೆ. ಅಷ್ಟು ಇಂಧನ ಸ್ಟಾಕ್ ಇದೆ. ಮುಂದಿನ ಎರಡು ತಿಂಗಳಿಗೆ ಬೇಕಾಗುವಷ್ಟು ಇಂಧನ ದಾಸ್ತಾನಿದೆ ಎಂದು ಕೇಂದ್ರ ಇಂಧನ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜನರು ಹೆಚ್ಚುವರಿ ಇಂಧನ ಸಂಗ್ರಹಿಸುವ ಅಗತ್ಯವಿಲ್ಲ. ಆತಂಕಕ್ಕೆ ಒಳಗಾಗಬೇಕಿಲ್ಲ. ಅನನುಕೂಲವಾದಲ್ಲಿ ಸಹಾಯವಾಣಿ ಸಂಖ್ಯೆ: 08539-221515ಗೆ ಕರೆ ಮಾಡುವಂತೆ ತಿಳಿಸಿದರು.