ಕೊಪ್ಪಳ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ಯಾಸ್​ ಸಿಲಿಂಡರ್​ ಪೂರೈಕೆ ಕುರಿತು ಚರ್ಚಿಸಲು ಆಹಾರ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ, ಎಎಸ್ಪಿ ಆರ್​. ಹೇಮಂತ್​ ಕುಮಾರ, ಎಸಿ ಮಹೇಶ್​ ಮಾಲಗಿತ್ತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ವಿಶ್ವನಾಥ್​, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ, ಕೊಪ್ಪಳ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ ಇದ್ದರು. 
ಕೊಪ್ಪಳ

ಅಡುಗೆ ಅನಿಲ ಪೂರೈಕೆಯಲ್ಲಿ ಕೊರತೆಯಿಲ್ಲ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ ಇಟ್ನಾಳ ಸ್ಪಷ್ಟನೆ
  • ಗ್ಯಾಸ್​ ಸಿಲಿಂಡರ್​ ವಿತರಣೆ ಕುರಿತು ಸಭೆ
ಕೊಪ್ಪಳ : ಜಿಲ್ಲೆಯಲ್ಲಿ ಅಡುಗೆ ಅನಿಲ ಪೂರೈಕೆಯಲ್ಲಿ ಯಾವುದೇ ಕೊರತೆಯಿಲ್ಲ. ಸಾರ್ವಜನಿಕರು ಯಾವುದೇ ರೀತಿಯ ಆತಂಕಕ್ಕೆ ಒಳಗಾಗಬಾರದು ಎಂದು ಡಿಸಿ ಡಾ. ಸುರೇಶ ಇಟ್ನಾಳ ಹೇಳಿದರು.
ಕೊಪ್ಪಳ ಡಿಸಿ ಕಚೇರಿ ಸಭಾಂಗಣದಲ್ಲಿ ಗುರುವಾರ ಗ್ಯಾಸ್​ ಸಿಲಿಂಡರ್​ ಪೂರೈಕೆ ಮತ್ತು ವಿತರಣೆಯಲ್ಲಿ ಉಂಟಾಗಿರುವ ಅಥವಾ ಉಂಟಾಗಬಹುದಾದ ಪರಿಸ್ಥಿತಿ ಕುರಿತು ಚರ್ಚಿಸಲು ಆಹಾರ ಇಲಾಖೆಯಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ಇತ್ತೀಚೆಗೆ ಜನರು ಆತಂಕದಿಂದ ಅತಿಯಾಗಿ ಗ್ಯಾಸ್​ ಬುಕಿಂಗ್​ ಮಾಡುತ್ತಿದ್ದು. ಇದರಿಂದಾಗಿ ವ್ಯವಸ್ಥೆಯ ಮೇಲೆ ಒತ್ತಡ ಉಂಟಾಗುತ್ತದೆ. ಜಿಲ್ಲೆಯಲ್ಲಿ ವಿವಿಧ ಏಜೆನ್ಸಿಗಳಿದ್ದು, ದಾಸ್ತಾನು ಲಭ್ಯವಿದೆ. ಕಮರ್ಷಿಯಲ್​ ಸಿಲಿಂಡರ್​ ಪೂರೈಕೆಯಲ್ಲಿ ವ್ಯತ್ಯಯವಾಗಬಹುದು. ಆದರೆ ಗೃಹ ಉಪಯೋಗಿ ಸಿಲಿಂಡರ್​ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗಿರುವುದಿಲ್ಲ. ಅಡುಗೆ ಅನಿಲ ಸಿಲಿಂಡರ್​ ಬುಕ್​ ಮಾಡಿದ 25 ದಿನದೊಳಗೆ ವಿತರಣೆ ಮಾಡಲಾಗುತ್ತದೆ. ಅಡುಗೆ ಸಿಲಿಂಡರ್​ ವಿತರಣೆ ವೇಳೆ ಬಿಲ್​ ಮೊತ್ತಕ್ಕಿಂತ ಹೆಚ್ಚು ಹಣ ತೆಗೆದುಕೊಂಡಲ್ಲಿ. ಅಂತಹ ಗ್ಯಾಸ್​ ಏಜೆನ್ಸಿಗಳ ವಿರುದ್ಧ ಪ್ರಕರಣ ದಾಖಲಿಸಿ, ಲೈಸನ್ಸ್​ ರದ್ದು ಗೊಳಿಸಲಾಗುತ್ತದೆ ಎಂದು ಗ್ಯಾಸ್​ ಏಜೆನ್ಸಿಗಳ ಪ್ರತಿನಿಧಿಗಳಿಗೆ ಸೂಚನೆ ನೀಡಿದರು.
ಹೋಟೆಲ್​ಗಳಲ್ಲಿ ಗ್ಯಾಸ್​ ಹೊರತಾಗಿ ಸೋಲಾರ್​ ಬಳಕೆ, ಬಯೋಗ್ಯಾಸ್​ ಬಳಕೆಯನ್ನು ಮಾಡಬೇಕು. ಖಾಸಗಿ ಕಂಪನಿಗಳು ಗ್ಯಾಸ್​ ಬಳಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿ, ಇದರ ಬದಲಿಗೆ ಸೋಲಾರ್​ ಹಾಗೂ ಇತರೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ತಿಳಿಸಬೇಕು. ಅಗತ್ಯಕ್ಕೆ ತಕ್ಕಂತೆ ಅಡುಗೆ ಅನಿಲವನ್ನು ಬಳಕೆ ಮಾಡಿ. ಯಾವುದೇ ರೀತಿಯ ಗ್ಯಾಸ್​ ವೇಸ್ಟ್​ ಮಾಡದಂತೆ ಜನರಿಗೆ ಅರಿವು ಮೂಡಿಸಿ. ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳಿಗೆ ಅನಿಲ ಪೂರೈಕೆಗೆ ಮೊದಲ ಆದ್ಯತೆ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ಎಸ್ಪಿ ಡಾ. ರಾಮ್​ ಎಲ್​. ಅರಸಿದ್ದಿ, ಎಎಸ್ಪಿ ಆರ್​. ಹೇಮಂತ್​ ಕುಮಾರ, ಎಸಿ ಮಹೇಶ್​ ಮಾಲಗಿತ್ತಿ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಅಧಿಕಾರಿ ವಿಶ್ವನಾಥ್​, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಅಜ್ಜಪ್ಪ ಸೊಗಲದ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಅಜ್ಮೀರ ಅಲಿ, ಕೊಪ್ಪಳ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಶರಣಪ್ಪ, ಕನಕಗಿರಿ ತಾಲೂಕು ಸಿ.ಡಿ.ಪಿ.ಒ ವಿರುಪಾಕ್ಷಿ ಹಾಗೂ ಐ.ಒ.ಸಿ., ಬಿ.ಪಿ.ಸಿ, ಹೆಚ್​.ಪಿ.ಸಿ. ಗ್ಯಾಸ್​ ಕಂಪನಿ ಅಧಿಕಾರಿಗಳು, ಜಿಲ್ಲೆಯ ಎಲ್ಲಾ ಗ್ಯಾಸ್​ ಏಜೆನ್ಸಿ ಮಾಲೀಕರು ಇದ್ದರು.