ಬಸವರಾಜ ರಾಯರಡ್ಡಿ 
ಕೊಪ್ಪಳ

ನಾನೂ ಸಚಿವ ಸ್ಥಾನ ಕೇಳಿರುವೆ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿಕೆ
  • ಮುಖ್ಯಮಂತ್ರಿ ಬದಲಾವಣೆ ಏನೂ ಇಲ್ಲ
  • ದೆಹಲಿ ಬಾಂಬ್ ಬ್ಲಾಸ್ಟ್ ಘಟನೆಗೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ
ಕೊಪ್ಪಳ: ಮುಖ್ಯಮಂತ್ರಿ ಸಿದ್ದರಾಮಯ್ಯ ದೆಹಲಿಗೆ ಹೋಗುತ್ತಿದ್ದಾರೆ. ನನಗೂ ಬರಲು ಹೇಳಿದ್ದಾರೆ. ಅದು ಸಚಿವ ಸಂಪುಟ ಚರ್ಚೆಗಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.
ನಗರದಲ್ಲಿ ಬುಧವಾರ ಸುದ್ದಿಗಾರರ ಜತೆ ಮಾತನಾಡಿ, ಸಚಿವ ಸ್ಥಾನ ವಿಚಾರವಾಗಿ ಮಂತ್ರಿಗಳನ್ನು ಮಾಡುವುದು ಸಿಎಂ ಪರಮಾಧಿಕಾರ. ನಾನೂ ಸಚಿವ ಸ್ಥಾನ ಕೇಳಿದ್ದು, ನೋಡೋಣ ಎಂದಿದ್ದಾರೆ. ನನ್ನ ಪ್ರಕಾರ ಸಿಎಂ ಬದಲಾವಣೆ ಇಲ್ಲ. ಮಾದ್ಯಮಗಳಲ್ಲಿ ಹೇಳುತ್ತಾರಷ್ಟೇ. ನಮ್ಮ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವ ವ್ಯವಸ್ಥೆ ಇದ್ದು, ಪಕ್ಷದ ಸಭೆ ನಿರ್ಣಯದಂತೆ ಮಾಡುತ್ತಾರೆ. ನಾನಂತೂ ಸಿದ್ದರಾಮಯ್ಯ ಪರ ಎಂದರು.
ದೆಹಲಿ ಕೆಂಪುಕೋಟೆ ಬಳಿ ಬಾಂಬ್ ಬ್ಲಾಸ್ಟ್ ಘಟನೆಗೆ ಕೇಂದ್ರ ಗುಪ್ತಚರ ಇಲಾಖೆ ವೈಫಲ್ಯವೇ ಕಾರಣ. ಬಾಂಬ್ ಬ್ಲಾಸ್ಟ್ ಘಟನೆಗೆ ಕಾರಣನಾದವನು ವಿದ್ಯಾವಂತ. ಡಾಕ್ಟರ್ ಆಗಿಯೇ ಇಂಥ ಹೀನಕೃತ್ಯ ಮಾಡಿರುವ ಅವನು ಮನುಷ್ಯನಲ್ಲ. ಪಾಕಿಸ್ತಾನದ ಸಂಘಟನೆಗಳ ಜತೆ ನಂಟಿದೆ ಎಂದು ತಿಳಿದುಬಂದಿದೆ.
ಇಂಥ ಘಟನೆಗಳಾದಾಗ ಉಗ್ರರನ್ನು ಹಿಡಿಯುತ್ತೇವೆ, ಹೊಡೆಯುತ್ತೇವೆಂದು ಕೇಂದ್ರ ಸರ್ಕಾರ ಹತ್ತು ವರ್ಷದಿಂದಲೂ ಹೇಳಿಕೊಂಡು ಬರುತ್ತಿದೆ. ದೆಹಲಿಯಲ್ಲಿ ಇಂಥ ಚಟುವಟಿಕೆ ನಡೆಯಬೇಕಾದರೆ ಕೇಂದ್ರ ಸರ್ಕಾರದ ಇಂಟೆಲಿಜೆನ್ಸಿ ವಿಫಲವಾಗಿದೆ. ಸ್ಫೋಟವಾದ ಕಾರನ್ನು ಬೆಳಗ್ಗೆಯಿಂದ ವಾಚ್ ಮಾಡುತ್ತಿದ್ದೆವು ಎನ್ನುತ್ತಾರೆ. ಆದರೆ, ಏಕೆ ಸ್ಫೋಟವಾಗಿದೆ ? ಹೀಗಾದರೆ ಇಲಾಖೆ ಏಕೆ ಬೇಕು ಎಂದು ಪ್ರಶ್ನಿಸಿದರು.
ಬಿಜೆಪಿ ನಾಯಕರು ಸಣ್ಣ ಘಟನೆಗಳಿಗೆ ರಾಜೀನಾಮೆ ಕೇಳುತ್ತಾರೆ. ಈಗ ಯಾಕೆ ಕೇಳುತ್ತಿಲ್ಲ. ನೈತಿಕತೆ ಇದ್ದರೆ ಅಮಿತ್ ಷಾ ರಾಜೀನಾಮೆ ಕೊಡಲಿ. ಪ್ರಧಾನಿ ನರೇಂದ್ರ ಮೋದಿ ದೇಶದ ಜನರ ಕ್ಷಮೆ ಕೇಳಲಿ. ಇಂಥ ಸಂದರ್ಭದಲ್ಲಿ ಎಲ್ಲ ಪಕ್ಷಗಳು ಒಂದಾಗಿ ಹೋಗಬೇಕಿದೆ. ಮಲ್ಲಿಜಾರ್ಜುನ ಖರ್ಗೆ ಕೂಡ ಇದನ್ನೇ ಹೇಳಿದ್ದಾರೆ. ಕೇಂದ್ರ ಸರ್ಕಾರ ಪಾಕಿಸ್ತಾನವನ್ನು ಭಯೋತ್ಪಾದಕ ದೇಶವೆಂದು ಘೋಷಿಸಲಿ, ಈ ಶಕ್ತಿ ಮೋದಿಗೆ ಇದೆಯೇ? ಬಿಹಾರ ಚುನಾವಣೆ ಒಂದನೆಯ ಹಂತದಲ್ಲಿ ಗೆಲ್ಲಲಾಗಲ್ಲವೆಂದು ಎರಡನೇ ಹಂತದಲ್ಲಿ ಇದು ಆಯಿತಾ? ನಾನು ಕೈವಾಡ ಇದೆ ಎನ್ನಲ್ಲ. ಏಕೆಂದರೆ ನನ್ನ ಬಳಿ ಪುರಾವೆ ಇಲ್ಲ, ಡೌಟ್ ಇದೆ ಎಂದರು.

ಗಣಿ ಇಲಾಖೆ ಅಧಿಕಾರಿಗಳ ವಿರುದ್ಧ ಸಿಎಂಗೆ ಬರೆದ ಪತ್ರಕ್ಕೆ ಸಂಬಂಧಿಸಿ ಎರಡ್ಮೂರು ದಿನಗಳಲ್ಲಿ ಕ್ರಮ ಆಗಲಿದೆ. ಇಡೀ ವ್ಯವಸ್ಥೆಯೇ ಹಾಳಾಗಿದೆ. ಆಡಳಿತದಲ್ಲಿ ಬದಲಾವಣೆ ಆಗಲೇಬೇಕಿದೆ. ಪತ್ರಕ್ಕೆ ಸಿಎಂ ಸಕಾರಾತ್ಮಕವಾಗಿ ಸ್ಪಂದಿಸಿದ್ದು, ನನ್ನ ಜತೆಯೂ ವಾತಾಡಿದ್ದಾರೆ. ಏನು ಕ್ರಮ ತೆಗೆದುಕೊಳ್ಳಬೇಕು ಎಂದು ಇಲಾಖೆ ಅಧಿಕಾರಿಗಳ ಜತೆಗೆ ಚರ್ಚಿಸಿದ್ದಾರೆ. ತಪ್ಪಿತಸ್ಥರ ವಿರುದ್ಧ ಬಹುತೇಕ ಕ್ರಮ ಆಗಲಿದೆ.