ವಾರದ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಬೀದಿ ಬದಿಯ ತಳ್ಳುಬಂಡಿ ವ್ಯಾಪಾರಿಗಳು ಗಂಗಾವತಿ ನಗರಸಭೆ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಒತ್ತಾಯಿಸಿದರು. ನಗರಸಭೆ ಮಾಜಿ ಸದಸ್ಯರಾದ ಕಮ್ಲಿಬಾಬಾ, ಜವಳಗೇರಾ ಹುಸೇನ್ ಪೀರಾ, ವ್ಯಾಪಾರಿಗಳ ಪ್ರತಿನಿಧಿಗಳಾದ ಕಾಸಿಂಸಾಬ್, ಮಹೆಬೂಬ್, ಯಲ್ಲಪ್ಪ, ಜೀಲಾನಿ ಇತರರಿದ್ದರು. 
ಕೊಪ್ಪಳ

ಸಂಡೇ ಸಂತೇಲಿ ನೋ ಬಂಡಿ!

ಪ್ರಮುಖ ಮುಖ್ಯಾಂಶಗಳು

  • ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ನಿರ್ದೇಶನ
  • ಪರ್ಯಾಯ ವ್ಯವಸ್ಥೆಗೆ ವ್ಯಾಪಾರಿಗಳ ಪಟ್ಟು
ಗಂಗಾವತಿ: ವಾರದ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಬೀದಿ ಬದಿಯ ತಳ್ಳುಬಂಡಿ ವ್ಯಾಪಾರಿಗಳು ನಗರಸಭೆ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಒತ್ತಾಯಿಸಿದರು.
ಫುಟ್‌ಪಾತ್  ಒತ್ತುವರಿ ತೆರವು ಕಾರ್ಯಾಚರಣೆಯಿಂದ ನಗರದಲ್ಲಿರುವ ಬೀದಿಬದಿ ವ್ಯಾಪಾರಿಗಳನ್ನು ಗುಂಡಮ್ಮ ಕ್ಯಾಂಪ್ ಸಿಟಿ ಮಾರುಕಟ್ಟೆಗೆ ಸ್ಥಳಾಂತರಿಸಲಾಗಿದೆ. ಇಲ್ಲಿ ವಹಿವಾಟು ಅಷ್ಟಕ್ಕಷ್ಟೇ ಇದ್ದು ವಾರಕ್ಕೊಮ್ಮೆ ನಡೆಯುವ ವಾರದ ಸಂತೆಯಲ್ಲಾದರೂ ವ್ಯಾಪಾರಕ್ಕೆ ಅವಕಾಶ ನೀಡಬೇಕು ಇಲ್ಲವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.
ಪೌರಾಯುಕ್ತ ಆರ್. ವಿರೂಪಾಕ್ಷಮೂರ್ತಿ ಅವರೊಂದಿಗೆ ವ್ಯಾಪಾರಿಗಳ ಪ್ರತಿನಿಧಿ ತಂಡ ಸಭೆ ನಡೆಸಿ, ವ್ಯಾಪಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿತು. ಪೌರಾಯುಕ್ತ ವಿರೂಪಾಕ್ಷಮೂರ್ತಿ ಮನವಿ ನಿರಾಕರಿಸಿದ್ದು, ಯಾವುದೇ ಕಾರಣಕ್ಕೂ ತಳ್ಳುಬಂಡಿ ವ್ಯಾಪಾರಿಗಳಿಗೆ ಅವಕಾಶವಿಲ್ಲ. 
ಗುಂಡಮ್ಮ ಕ್ಯಾಂಪ್ ಸಿಟಿ ಮಾರುಕಟ್ಟೆಯಲ್ಲಿ ವಹಿವಾಟು ನಡೆಸಬೇಕಿದ್ದು, ರಸ್ತೆ ಬದಿಯಲ್ಲಿ ಕಂಡು ಬಂದರೆ ಬಂಡಿಗಳನ್ನು ಜಪ್ತಿ ಮಾಡಲಾಗುವುದು. ಭಾನುವಾರ ವಾರದ ಮಾರುಕಟ್ಟೆಯಲ್ಲಿ ನೆಲದಲ್ಲಿ ಕುಳಿತು ವ್ಯಾಪಾರ ಮಾಡಲು ತಾತ್ಕಾಲಿಕ ಅವಕಾಶ ನೀಡಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಗುಂಡಮ್ಮ ಕ್ಯಾಂಪ್‌ಗೆ ಪ್ರತಿಯೊಬ್ಬರೂ ಸ್ಥಳಾಂತರವಾಗುವುದು ಅನಿವಾರ್ಯ ಎಂದರು.
ನಗರಸಭೆ ಮಾಜಿ ಸದಸ್ಯರಾದ ಕಮ್ಲಿಬಾಬಾ, ಜವಳಗೇರಾ ಹುಸೇನ್ ಪೀರಾ, ವ್ಯಾಪಾರಿಗಳ ಪ್ರತಿನಿಧಿಗಳಾದ ಕಾಸಿಂ ಸಾಬ್, ಮಹೆಬೂಬ್, ಯಲ್ಲಪ್ಪ, ಜಿಲಾನಿ ಇತರರಿದ್ದರು.
ಜಟಾಪಟಿ, ಒಪ್ಪದ ವ್ಯಾಪಾರಿಗಳು
ವಾರದ ಮಾರುಕಟ್ಟೆಯಲ್ಲಿ ನೆಲದ ಮೇಲೆ ಕುಳಿತು ವ್ಯಾಪಾರ ಮಾಡಲು ಬಂಡಿ ವ್ಯಾಪಾರಿಗಳು ನಿರಾಕರಿಸಿದರೆ, ಕೆಲವರು ಒಪ್ಪಿಕೊಂಡಿದ್ದರಿಂದ ಕೆಲಕಾಲ ವ್ಯಾಪಾರಿಗಳ ನಡುವೆ ಮಾತಿನ ಜಟಾಪಟಿ ನಡೆಯಿತು. ಮಾರುಕಟ್ಟೆ ಮುಖ್ಯ ರಸ್ತೆಯಲ್ಲಿ ಬಂಡಿಗಳನ್ನಿಡಲು ಅವಕಾಶ ನೀಡುವಂತೆ ಕೆಲವರು ಒತ್ತಾಯಿಸಿದರೂ ಅಧಿಕಾರಿಗಳು ಒಪ್ಪಲಿಲ್ಲ. ವ್ಯಾಪಾರಿಗಳ ನಡುವೆ ಒಮ್ಮತ ಮೂಡದಿದ್ದರಿಂದ ಪ್ರತಿಭಟನೆ ಕೈ ಬಿಡಲಾಗಿದ್ದು, ಅಧಿಕಾರಿಗಳ ನಿಲುವನ್ನು ಒಪ್ಪದ ವ್ಯಾಪಾರಿಗಳು ನಗರಸಭೆ ಆವರಣದಿಂದ ಹೊರ ನಡೆದರು.
"

ಎಲ್ಲ ಬಗೆಯ ವ್ಯಾಪಾರಿಗಳು ಗುಂಡಮ್ಮ ಕ್ಯಾಂಪ್‌ಗೆ ಶ್‌ಟಿ ಆಗುವುದು ಅನಿವಾರ್ಯವಾಗಿದ್ದು, ಭಾನುವಾರಕ್ಕೊಮ್ಮೆ ನಡೆಯುವ ವಾರದ ಸಂತೆಯಲ್ಲಿ ಯಾವುದೇ ಕಾರಣಕ್ಕೂ ತಳ್ಳುಬಂಡಿ ವ್ಯಾಪಾರಿಗಳಿಗೆ ಅವಕಾಶ ನೀಡಲ್ಲ. ಬೇಕಾದರೆ ನೆಲದ ಮೇಲೆ ಕುಳಿತು ವ್ಯಾಪಾರ ಮಾಡಲಿ, ಆದರೆ ರಸ್ತೆಯತ್ತ ಬರುವಂತಿಲ್ಲ.

— ಆರ್. ವಿರೂಪಾಕ್ಷಮೂರ್ತಿ, ಪೌರಾಯುಕ್ತ