ಕೊಪ್ಪಳ ತಾಲೂಕಿನ ಬಸಾಪುರ ಬಳಿ ಕೊಚ್ಚಿ ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆ.
- ತ್ವರಿತ ದುರಸ್ತಿಗೆ ಆಗ್ರಹ
- ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ರೈತರ ಆಕ್ರೋಶ
ಕೊಪ್ಪಳ: ತಾಲೂಕಿನ ಬಸಾಪುರ ಬಳಿ ತುಂಗಭದ್ರಾ ಎಡದಂಡೆ ನಾಲೆ ಕೊಚ್ಚಿ ಹೋಗಿದ್ದು, ಜಮೀನಿಗೆ ನೀರು ನುಗ್ಗಿ ಅಪಾರ ಭತ್ತ ಹಾನಿಯಾಗಿದೆ. ತಿಂಗಳ ಹಿಂದೆಯೇ ಬೋಂಗಾ ಬಿದ್ದಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದರಿಂದ ಕೊಪ್ಪಳ, ರಾಯಚೂರು ಜಿಲ್ಲೆ ಜನತೆಗೆ ಸಿಗಬೇಕಿದ್ದ ಜೀವಜಲ ವ್ಯರ್ಥವಾಗಿ ಹರಿದಿದೆ.
ತುಂಗಭದ್ರಾ ಜಲಾಶಯದ ಕ್ರಸ್ಟ್ ಗೇಟ್ ಅಳವಡಿಕೆ ಕಾರಣ ಎರಡಬೇ ಬೆಳೆಗೆ ನೀರು ನೀಡದೆ ಖಾಲಿ ಮಾಡಲಾಗಿದೆ. ಮಂಗಳವಾರವಷ್ಟೇ ರಾಯಚೂರು ಭಾಗಕ್ಕೆ ಕುಡಿವ ನೀರಿಗಾಗಿ 2ಸಾವಿರ ಕ್ಯೂಸೆಕ್ ನೀರು ನಾಲೆಗೆ ಹರಿಸಲಾಗಿದೆ. ಮೊದಲೆ ಬೋಂಗಾ ಇದ್ದರಿಂದ ನೀರಿನ ಒತ್ತಡಕ್ಕೆ ಸುಮಾರು 30 ಮೀಟರ್ನಷ್ಟು ಕಾಲುವೆ ಕೊಚ್ಚಿ ಹೋಗಿದೆ.
ಕಾಲುವೆಗೆ ಹೊಂದಿಕೊಂಡ ರೆಸಾರ್ಟ್ಗಳು, ಭತ್ತದ ಗದ್ದೆಗೆ ನೀರು ನುಗ್ಗಿದೆ. ಮರಳು, ಕಲ್ಲು, ಗಿಡಗಳು ಜಮೀನಲ್ಲಿ ಹರಡಿಕೊಂಡಿವೆ. ರೆಸಾರ್ಟ್ ಬಳಿ ಇದ್ದ ಬೈಕ್ಗಳು ಹಲವು ದೂರದಷ್ಟು ನೀರಿಗೆ ತೇಲಿಹೋಗಿವೆ. ಜಲಾಶಯದಿಂದ ನೀರಿನ ಹರಿವು ನಿಲ್ಲಿಸಿದ್ದು, ದುರಸ್ಥಿಗೆ 8-10 ದಿನಗಳ ಸಮಯ ಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.