ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಪ್ರಮುಖರಾದ ಕರುಣಾಕರ್ ಖಾಸಲೆ, ಚಂದ್ರಶೇಖರ ಹಲಗೇರಿ, ನವೀನ ಗುಳಗಣ್ಣವರ, ಡಾ.ಬಸವರಾಜ ಕ್ಯಾವಟರ್ ಇತರರಿದ್ದರು.
ಕೊಪ್ಪಳ: ರಾಜ್ಯದಲ್ಲಿ ಗೂಂಡಾ ಸರ್ಕಾರ ಅಧಿಕಾರದಲ್ಲಿದೆ. ಜನರಿಗೆ ರಕ್ಷಣೆ ಇಲ್ಲದಂತಾಗಿದ್ದು, ಇದನ್ನು ಖಂಡಿಸಿ ಹೋರಾಟ ನಿರಂತರವಾಗಿರಲಿದೆ ಎಂದು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣ ಸ್ವಾಮಿ ಆರೋಪಿಸಿದರು.
ನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ. ಕೆಸರೆರಚಾಟದಲ್ಲಿ ಸರ್ಕಾರ ಕಾಲ ಕಳೆಯುತ್ತಿದೆ. ಗ್ಯಾರಂಟಿ ಹೆಸರಿನಲ್ಲಿ ಐದು ವರ್ಷ ಅಧಿಕಾರ ಮುಗಿಸಬಹುದೆಂಬ ಲೆಕ್ಕಾಚಾರದಲ್ಲಿದೆ. ನಾಲ್ಕು ಬಾರಿ ಕಲಬುರಗಿಯಲ್ಲಿ ಸಮಾವೇಶ ಮಾಡಿದ್ದಾರೆ. ಸಾವಿರಾರು ಕೋಟಿ ರೂ. ನೀಡುವ ಭರವಸೆ ನೀಡಿದರೂ ನಯಾಪೈಸೆ ಅನುದಾನ ಬಂದಿಲ್ಲ. ದರ್ಪ ಹೆಚ್ಚಿದೆ. ಕ್ಷುಲ್ಲಕ ಕಾರಣಗಳಿಗೆ ಗಲಾಟೆ ಆಗುತ್ತಿವೆ. ದಲಿತರು, ಹಸುಳೆಗಳಮೇಲೆ ಅತ್ಯಾಚಾರ ಹೆಚ್ಚುತ್ತಿವೆ. ಕೊಲೆ, ದರೋಡೆ, ಬ್ಯಾಂಕ್ಗಳಿಗೆ ಕನ್ನ ಹಾಕಲಾಗುತ್ತಿದೆ. ಎಲ್ಲೇ ಹಗರಣ ನಡೆದರೂ ತನಿಖೆಯಲ್ಲಿ ಸರ್ಕಾರದ ಪಾತ್ರ ಇರುವುದು ಕಂಡುಬರುತ್ತಿದೆ. ಇಂಥ ಸರ್ಕಾರ ಬೇಕಾ ? ಕಳ್ಳರೊಂದಿಗೆ ಸರ್ಕಾರವೂ ಕೈ ಜೋಡಿಸಿದೆನಾ ಎಂದು ಅನುಮಾನ ವ್ಯಕ್ತಪಡಿಸಿದರು.
ದ್ವೇಷ ಭಾಷಣ ಹೆಸರಿನಲ್ಲಿ ಬಿಲ್ ಮಂಡಿಸಿದ್ದಾರೆ. ಇದಕ್ಕೆ ಪ್ರತ್ಯೇಕ ಕಾಯ್ದೆ ಅವಶ್ಯವಿಲ್ಲ. ಈಗಾಗಲೇ ಇದಕ್ಕೆಲ್ಲ ಕಾನೂನು ಇದೆ. ಅದೇ ಕಾನೂನು ಅಡಿ ಅನೇಕರಿಗೆ ಶಿಕ್ಷೆಯಾಗಿದೆ. ಹೊಸ ಕಾನೂನಿನಲ್ಲಿ ಯಾವುದೇ ನೋಟಿಸ್ ಇಲ್ಲ, ಸಮಾಜಾಯಿಷಿ ಪಡೆಯುವಂತಿಲ್ಲ. ಏಕಾಏಕಿ ಅರೆಸ್ಟ್ ಮಾಡಬಹುದು. ಸರ್ಕಾರದ ವಿರುದ್ಧ ಯಾರೋಬ್ಬರೂ ದ್ವನಿ ಎತ್ತದಂತೆ ತಡೆಯಲು ಕಾಯ್ದೆ ಜಾರಿ ಮಾಡುವ ಯತ್ನ ನಡೆದಿದೆ. ಕೈ ಸನ್ನೆ, ಕಣ್ಣು ಸನ್ನೆ ಮಾಡಿದರೂ ಪ್ರಕರಣ ದಾಖಲಿಸಲು ಅವಕಾಶವಿದೆ. ಇದು ಹಿಟ್ಲರ್ ಆಡಳಿತ. ವಾಕ್ ಸ್ವಾತಂತ್ರ್ಯದ ದಮನ ಎಂದು ವಾಗ್ದಾಳಿ ನಡೆಸಿದರು.
ಶಿಡ್ಲಘಟ್ಟದಲ್ಲಿ ಕೆಎಎಸ್ ಅಧಿಕಾರಿಣಿಗೆ ರಾಜೀವ್ ಗೌಡ ಅವಾಚ್ಯವಾಗಿ ಮಾತನಾಡಿದರೂ ಕೇಸ್ ಹಾಕಿಲ್ಲ. ಬಳ್ಳಾರಿ ಬ್ಯಾನರ್ ಗಲಾಟೆ ವಿಷಯದಲ್ಲಿ ಶಾಸಕ ಭರತ್ ರೆಡ್ಡಿ ಬಂಧನವಾಗಿಲ್ಲ. ಸಾರ್ವಜನಿಕವಾಗಿ ಬೆಂಕಿ ಹಚ್ಚುವೆ ಎಂದು ಪ್ರಚೋದನೆ ಮಾಡಿದ್ದಾರೆ. ಆದರೆ, ಶಾಸಕ ಜನಾರ್ಧನರೆಡ್ಡಿ ಇತರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ರಾಜ್ಯದೆಲ್ಲೆಡೆ ಕಾಂಗ್ರೆಸ್ ಶಾಸಕರು, ಕಾರ್ಯಕರ್ತರು ಅಧಿಕಾರಿಗಳು, ಜನರ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ಜನ ಇವರ ವರ್ತನೆಯಿಂದ ನೊಂದು ಎಲ್ಲ ಚುನಾವಣೆಯಲ್ಲಿ ಸೋಲಿಸುತ್ತಿದ್ದಾರೆ. ಅದನ್ನು ಇವರು ವೋಟ್ ಚೋರಿ ಅನ್ನುತ್ತಾರೆ. ಅದು ದಿಲ್ ಚೋರಿ. ರಾಹುಲ್ ಗಾಂಧಿ ದೆಹಲಿ ವಾಯುಮಾಲಿನ್ಯಕ್ಕೆ ಮತ ಚೋರಿ ಕಾರಣ ಎನ್ನುತ್ತಾರೆ. ಅಂಥ ಮೇಧಾವಿಗಳು ಬೇರೆಲ್ಲಿ ಸಿಗಲು ಸಾಧ್ಯ ? ಎಂದು ಟೀಕಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಢೇಸುಗೂರು, ಪ್ರಮುಖರಾದ ಕರುಣಾಕರ್ ಖಾಸಲೆ, ಚಂದ್ರಶೇಖರ ಹಲಗೇರಿ, ನವೀನ ಗುಳಗಣ್ಣವರ, ಡಾ.ಬಸವರಾಜ ಕ್ಯಾವಟರ್ ಇತರರಿದ್ದರು
ನರೇಗಾದಲ್ಲಿನ ಅಕ್ರಮ ತಡೆಗೆ ತಿದ್ದುಪಡಿ ತಂದು ಹೆಸರು ಬದಲಾಯಿಸಲಾಗಿದೆ. ಈ ಬಗ್ಗೆ ವಿಶೇಷ ಅಧಿವೇಶನ ಕರೆದಿದ್ದು ಸ್ವಾಗತಾರ್ಹ. ಜನರಿಗೆ ಮಾಹಿತಿ ನೀಡುತ್ತೇವೆ. ಜರ್ಮನಿಯಿಂದ ಚಾನ್ಸಲರ್ ಬಂದರೆ ಅವರನ್ನು ಸ್ವಾಗತಿಸುವ ಗುಣ ಸಿಎಂ ಅವರಿಗಿಲ್ಲ. ಸಿಎಂ, ಡಿಸಿಎಂ ಅವರನ್ನು ರಾಹುಲ್ ಗಾಂಧಿ ಫುಟ್ ಪಾತ್ ಮೇಲೆ ನಿಲ್ಲಿಸಿದ್ದಾರೆ. ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಠೇವಣಿ ಕಳೆದುಕೊಳ್ಳುತ್ತಿದೆ. ಶಿವಸೇನೆಯೂ ಅಧಿಕಾರಕ್ಕಾಗಿ ತಪ್ಪು ಹಾದಿ ತುಳಿದಿದ್ದಕ್ಕೆ ಮನೆಗೆ ಹೋಗಲಿದೆ.