ಯಲಬುರ್ಗಾದ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಕರ ಸಭೆಯನ್ನು ಪ್ರಾಚಾರ್ಯ ರೇವಪ್ಪ ತೇಲಿ ಉದ್ಘಾಟಿಸಿದರು.
ಯಲಬುರ್ಗಾ: ಮಕ್ಕಳ ಶ್ರೇಯೋಭಿವೃದ್ಧಿ ಹಾಗೂ ಶೈಕ್ಷಣಿಕ ಪ್ರಗತಿಯಲ್ಲಿ ಪಾಲಕರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಾಚಾರ್ಯ ರೇವಪ್ಪ ತೇಲಿ ಹೇಳಿದರು.
ಪಟ್ಟಣದ ಸಂಗನಾಳ ರಸ್ತೆಯಲ್ಲಿರುವ ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶನಿವಾರ ಏರ್ಪಡಿಸಿದ್ದ ಪಾಲಕರ ಸಭೆಯಲ್ಲಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಪ್ರಗತಿ ಕೇವಲ ಶಾಲೆಯ ಶಿಕ್ಷಕರ ಜವಾಬ್ದಾರಿಯಾಗಿರದೆ, ಪಾಲಕರ ಪಾತ್ರವೂ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಶಾಲೆಯಲ್ಲಿ ಕಲಿತ ವಿಷಯಗಳನ್ನು ಮನನ ಮಾಡಿಕೊಳ್ಳುವಂತೆ ಪ್ರೋತ್ಸಾಹಿಸಬೇಕು.
ವಿದ್ಯಾಭ್ಯಾಸದ ಬಗ್ಗೆ ಆಗಾಗ್ಗೆ ವಿಚಾರಿಸಿ, ಕಲಿಕೆಯಲ್ಲಿ ಹಿಂದುಳಿದಿದ್ದರೆ ಶಿಕ್ಷಕರ ಗಮನಕ್ಕೆ ತಂದು ಪರಿಹರಿಸಿಕೊಳ್ಳಬೇಕು. ಉತ್ತಮ ಅಭ್ಯಾಸ, ಶಿಸ್ತು, ಸಮಯಪಾಲನೆ ಹಾಗೂ ಜವಾಬ್ದಾರಿಯ ಮನೋಭಾವ ಬೆಳೆಸಬೇಕು ಎಂದ ಅವರು, ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಉತ್ತಮ ಶೈಕ್ಷಣಿಕ ವಾತಾವರಣ ಕಲ್ಪಿಸುವುದರ ಜತೆಗೆ ಪ್ರತಿಭೆ ಹಾಗೂ ಕೌಶಲಗಳನ್ನು ಗುರುತಿಸಿ ಪ್ರೋತ್ಸಾಹಿಸಲಾಗುತ್ತಿದೆ ಎಂದರು.
ಶಾಲೆಯ ಉಪಪ್ರಾಚಾರ್ಯ ಹನುಮಪ್ಪ ಉಪ್ಪಾರ, ಪ್ರಭಾರ ನಿಲಯಪಾಲಕರಾದ ಕಲ್ಲಿನಾಥಯ್ಯ ಹಿರೇಗೌಡ್ರ, ಬಸುಕುಮಾರ ಕೊಪ್ಪದ್, ಗವಿಸಿದ್ದಪ್ಪ ಕಲ್ಗುಡಿ, ವೃಂದ ಶೇಠ, ಸಾವಿತ್ರಿ ಡಂಬಳ, ಸುಂದರಾ ಜೋಷಿ, ಭಾಗ್ಯಶ್ರೀ ಹೊಟ್ಟಿ, ಜಯಶ್ರೀ, ಪೂರ್ಣಿಮಾ ಎಸ್., ಶಿವರಾಜ ಕುಂಬಾರ, ಪಾಲಕರಾದ ವಿದ್ಯಾ ಕೊಪ್ಪಳ, ಶರಣಯ್ಯ ಬೆಣಕಲ್ ಇತರರಿದ್ದರು.