ಕುಕನೂರು ತಾಲೂಕಿನ ಯರೇಹಂಚಿನಾಳ ಗ್ರಾಮದ ಜಮೀನೊಂದರಲ್ಲಿ ಕಡಲೆ ಹೊಟ್ಟು ಮಾರಾಟಕ್ಕೆ ಟ್ರಾೃಕ್ಟರ್‌ನಲ್ಲಿ ತುಂಬುತ್ತಿರುವುದು.
ಕುಕನೂರು: ಉದ್ಯೋಗ ಅರಸಿ ಮಹಾನಗರಗಳಿಗೆ ತೆರಳಿದ್ದ ಯುವ ಜನತೆ ಹುಟ್ಟೂರಿಗೆ ಆಗಮಿಸಿ ಹೈನುಗಾರಿಕೆ, ಕುರಿ ಸಾಕಣೆಯತ್ತ ಹೆಚ್ಚು ಗಮನ ಹರಿಸಿದ್ದಾರೆ. ಇದರಿಂದಾಗಿ ಬಿಳಿಜೋಳದ ಮೇವು, ಕಡಲೆ ಹೊಟ್ಟಿಗೆ ಬಾರಿ ಬೇಡಿಕೆ ಬಂದಿದೆ.
ಅವಳಿ ತಾಲೂಕುಗಳಾದ ಯಲಬುರ್ಗಾ ಹಾಗೂ ಕುಕನೂರು ಯರೆ ದೊರೆ ಎನ್ನುವ ಹೆಗ್ಗಳಿಕೆ ಪಡೆದಿದ್ದು, ಇಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ, ಬಿಳಿಜೋಳ ಹೆಚ್ಚು ಬಿತ್ತನೆಯಾಗುತ್ತದೆ. ಯಲಬುರ್ಗಾ ತಾಲೂಕಿನಲ್ಲಿ 25,450 ಹೆಕ್ಟೇರ್‌ನಲ್ಲಿ ಕತಡೆ, 2,650 ಹೆಕ್ಟೇರ್‌ನಲ್ಲಿ ಬಿಳಿಜೋಳ ಬೆಳೆದಿದ್ದು, ಕುಕನೂರು ತಾಲೂಕಿನಲ್ಲಿ 34,500 ಹೆಕ್ಟೇರ್‌ನಲ್ಲಿ ಕಡಲೆ, 4,799 ಹೆಕ್ಟೇರ್ ಪ್ರದೇಶದಲ್ಲಿ ಬಿಳಿಜೋಳ ಬೆಳೆಯಲಾಗಿದೆ.
ಅತಿ ಹೆಚ್ಚು ಕುಕನೂರು ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಕಡಲೆ, ಬಿಳಿಜೋಳ ಬೆಳೆಯಲಾಗಿದೆ. ಹೀಗಾಗಿ ತಾಲೂಕಿನ ಯರೇಹಂಚಿನಾಳ, ಬಿನ್ನಾಳ, ಬನ್ನಿಕೊಪ್ಪ, ಇಟಗಿ, ಮಂಡಲಗಿರಿ, ಚಿಕ್ಕೆನಕೊಪ್ಪ, ಭಟ್ಟಪನಹಳ್ಳಿಗುಡಿ, ಮನ್ನಾಪೂರ, ನಿಂಗಾಪುರ, ಭಾನಾಪುರ, ವೀರಾಪುರ, ಬೆಣಕಲ್ ಸೇರಿದಂತೆ ವಿವಿಧ ಗ್ರಾಮಗಳಿಗೆ ಬಿಳಿಜೋಳದ ಮೇವು, ಕಡಲೆ ಹೊಟ್ಟು ಖರೀದಿಗೆ ಬರುವವರ ಸಂಖ್ಯೆ ಹೆಚ್ಚಾಗಿದೆ.
ಒಂದು ಟ್ರಾೃಕ್ಟರ್ ಬಿಳಿಜೋಳದ ಮೇವಿಗೆ 8,000 ರೂ. ಹಾಗೂ ಕಡಲೆ ಹೊಟ್ಟಿಗೆ 8,000 ರೂ. ಬೆಲೆ ನಿಗದಿಯಾಗಿದೆ. ಮೇವು, ಹೊಟ್ಟು ಸರಬರಾಜನ್ನೇ ಕೆಲವರು ನಿತ್ಯ ಕಾಯಕ ಮಾಡಿಕೊಂಡಿದ್ದಾರೆ. ಗದಗ, ಕೊಪ್ಪಳ ಜಿಲ್ಲೆಯ ಗೋ ಮತ್ತು ಕುರಿ ಸಾಕಣೆ ಮಾಡಿರುವ ಮಾಲೀಕರಿಗೆ ಸ್ಥಳೀಯ ರೈತರಿಂದ ಹೊಟ್ಟು-ಮೇವು ಖರೀದಿಸಿ ಕೊಂಡೊಯ್ಯುತ್ತಿದ್ದಾರೆ.
ಕಡಲೆ-ಬಿಳಿ ಜೋಳಕ್ಕಿಲ್ಲ ದರ
ಪ್ರಸಕ್ತ ವರ್ಷ ಕಡಲೆ ಬೆಲೆ ಕುಸಿತದಿಂದ ರೈತರು ಸಂಕಷ್ಟ ಎದುರಿಸುತ್ತಿದ್ದು, ಕ್ವಿಂಟಾಲ್‌ಗೆ 5,200 ರೂ., ಬಿಳಿಜೋಳ 4,200 ರೂ.ಗೆ ಮಾರಾಟವಾಗುತ್ತಿದೆ. ಎರಡೂ ಬೆಳೆಗಳ ಬೆಲೆ ಪ್ರತಿ ವರ್ಷ 8 ಸಾವಿರದ ಗಡಿ ದಾಡುತ್ತಿತ್ತು. ಈ ಬಾರಿ ಕುಸಿತ ಕಂಡಿದ್ದು, ಇದರ ಹೊಟ್ಟು-ಮೇವಿಗೆ ಬೆಲೆ ಅಧಿಕವಿದ್ದರಿಂದ ರೈತರು ಮಾರಾಟಕ್ಕೆ ಮುಂದಾಗಿದ್ದಾರೆ. ಈ ಹಿಂದೆ ದನ-ಕರುಗಳಿಗೆ ಮೇವು, ಹೊಟ್ಟು ಕೇಳಿದರೆ ಸಾಕು ಹಣ ಪಡೆಯದೆ ರೈತರು ನೀಡುತ್ತಿದ್ದ ಪದ್ಧತಿ ಇತ್ತು. ಕಾಲ ಬದಲಾಗಿದ್ದು ಹಣ ಪಡೆದು ಮಾರಾಟ ಮಾಡುತ್ತಿದ್ದಾರೆ. ಒಟ್ಟಾರೆ ಫಸಲಿಗಿಲ್ಲದ ಬೆಲೆ ಹೊಟ್ಟು- ಮೇವಿಗಿರುವುದು ಆಶ್ಚರ್ಯವೇ ಸರಿ.
ರೈತರು ಬೆಳೆದ ಧಾನ್ಯಗಳಿಗೆ ಬೆಲೆಯಿಲ್ಲ. ಸದ್ಯದ ಪರಿಸ್ಥಿತಿಯಲ್ಲಿ ಜಾನುವಾರಗಳ ಮೇವು-ಹೊಟ್ಟಿಗೆ ಬೆಲೆ ಹೆಚ್ಚಾಗಿದೆ. ಇದರಿಂದ ಹಿಂಗಾರು ಹಂಗಾಮಿನಲ್ಲಿ ಬೆಳೆದ ಬಿಳಿಜೋಳ, ಕಡಲೆ ಹೊಟ್ಟು ಖರೀದಿಗೆ ಬೇರೆ ಬೇರೆ ಜಿಲ್ಲೆಯಿಂದ ರೈತರು ಬರುತ್ತಿದ್ದಾರೆ. ಕೃಷಿಕರೂ ಕೂಡ ಲಾಭದ ದೃಷ್ಟಿಯಿಂದ ಮೇವು-ಹೊಟ್ಟು ಮಾರುತ್ತಿದ್ದಾರೆ.
ವಾಣಿಜ್ಯ ಬೆಳೆಯ ಕ್ಷೇತ್ರ ಹೆಚ್ಚಾದ ಹಿನ್ನ್ನೆಲೆಯಲ್ಲಿ ಈ ಬಾರಿ ಕಡಲೆ ಹೊಟ್ಟು, ಬಿಳಿಜೋಳದ ಮೇವಿಗೆ ಬೇಡಿಕೆ ಹೆಚ್ಚಾಗಿದೆ. ಅಲ್ಲದೇ ಗೋ ಶಾಲೆಯಿಂದಲೇ ಹೆಚ್ಚು ಬೇಡಿಕೆ ಇದೆ.