ಕನಕಗಿರಿ ತಾಲೂಕಿನ ಜಮೀನೊಂದರಲ್ಲಿ ಕರಡಿಗಳು ಹಾಳು ಮಾಡಿರುವ ಬೀಜೋತ್ಪಾದನೆ ಕಲ್ಲಂಗಡಿ ಹಣ್ಣಗಳನ್ನು ಪ್ರದರ್ಶಿಸುತ್ತಿರುವ ರೈತ ಮತ್ತು ರೈತ ಮುಖಂಡರು.
- ರೈತರಿಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲು
- ಕರಡಿಧಾಮ ಸ್ಥಾಪನೆಗೆ ಒತ್ತಾಯ
ಕುಷ್ಟಗಿ: ತಾಲೂಕು ವ್ಯಾಪ್ತಿಯ ಗುಡ್ಡಗಾಡು ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಕರಡಿಗಳು ಕಾಣಿಸಿದ್ದು, ರೈತರಿಗೆ ಬೆಳೆ ನಾಶದ ಆತಂಕ ಎದುರಾಗಿದೆ. ಈ ಭಾಗದಲ್ಲಿ ಕೂಡಲೇ ಕರಡಿಧಾಮ ನಿರ್ಮಿಸಬೇಕೆಂಬ ಕೂಗು ಕೇಳಿ ಬರುತ್ತಿದೆ. ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ಬೆಳೆಯುವ ಬೀಜೋತ್ಪಾದನೆ ಬೆಳೆ ಸೇರಿದಂತೆ ವಾಣಿಜ್ಯಬೆಳೆ ಉಳಿಸಿಕೊಳ್ಳುವುದು ರೈತರಿಗೆ ಡೊಡ್ಡ ಸವಾಲಾಗಿದೆ.
ಉಪಟಳ ತಪ್ಪಿಸಿ: ತಾಲೂಕಿನ ತಾವರಗೇರಾ ಭಾಗದ ಹೊನಗಡ್ಡಿ, ಹೊಮ್ಮಿನಾಳ, ಲಿಂಗದಹಳ್ಳಿ, ಮತ್ತಿನಾಳ, ಸಂಗನಾಳ, ಪುರ, ವಿರುಪಾಪುರ, ಕನ್ನಾಳ, ಮೆತ್ತಿನಾಳ, ಹುಲಿಯಾಪುರ, ಜಿ.ಎಚ್.ಕ್ಯಾಂಪ್, ಗುಡ್ಡದ ಹನಮಸಾಗರ, ಹುಲಿಯಾಪುರ ತಾಂಡಾ, ಹಿರೇ ತಮ್ಮಿನಾಳ ಸೇರಿದಂತೆ ಗುಡ್ಡಗಾಡು ಪ್ರದೇಶದ ಗ್ರಾಮಗಳಲ್ಲಿ ಆಗಾಗ್ಗೆ ಕಾಡು ಪ್ರಾಣಿಗಳು ಕಾಣುತ್ತಿವೆ. ಇದರಿಂದ ರೈತರು ರಾತ್ರಿ ವೇಳೆ ಜಮೀನಿಗೆ ತೆರಳಲು ಹಿಂದೇಟು ಹಾಕುವಂತಾಗಿದೆ.
ಈ ಭಾಗದ ಖುಷ್ಕಿ ಪ್ರದೇಶದ ರೈತರು ಅಲ್ಪ-ಸಲ್ಪ ಬೋರ್‌ವೆಲ್ ನೀರಿನಿಂದ ಕಲ್ಲಂಗಡಿ, ಮಾವು, ಹುಣಸೆ, ದಾಳಿಂಬೆ, ಪಪ್ಪಾಯ, ಬಾಳೆ ಇತರ ಬೆಳೆಯುತ್ತಿದ್ದಾರೆ. ಆದರೆ, ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ನಾಶವಾಗುತ್ತಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಮುಂಗಾರಿನ ಬೆಳೆ ಸಂರಕ್ಷಣೆಗೆ ಹೊಲದ ಸುತ್ತ ಪರದೆ ಅಳವಡಿಸಿದರೂ ಕಾಡು ಪ್ರಾಣಿಗಳು ದಾಳಿ ತಪ್ಪುತ್ತಿಲ್ಲ. ಹೀಗಾಗಿ ಕರಡಿಧಾಮ ನಿರ್ಮಿಸಲು ಅರಣ್ಯ ಇಲಾಖೆ ಮುಂದಾಗಬೇಕೆಂಬುದು ರೈತರ ಒತ್ತಾಸೆಯಾಗಿದೆ.
"
ಕುಷ್ಟಗಿ ತಾಲೂಕಿನ ಗುಡ್ಡ ಪ್ರದೇಶದಲ್ಲಿ ಕರಡಿ, ನರಿ, ತೋಳ ಕಾಣಿಸಿದ್ದು, ಆಹಾರಕ್ಕಾಗಿ ಕೃಷಿ ಜಮೀನುಗಳಿಗೆ ನುಗ್ಗಿ ಬೆಳೆ ನಾಶಪಡಿಸುತ್ತಿವೆ. ಕೂಡಲೇ ಕರಡಿಧಾಮ ನಿರ್ಮಾಣಕ್ಕೆ ವಲಯ ಅರಣ್ಯಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.
— ಅಮರೇಶ್ ಮರಕಟ್ ರೈತ, ಹೊನಗಡ್ಡಿ