ಕನಕಗಿರಿ ಸಿಡಿಪಿಒ ಕಚೇರಿ ಹೊರನೋಟ.
- ಸೌಲಭ್ಯ ಕಲ್ಪಿಸುವ ಸರ್ವೇಯಲ್ಲಿ 6018 ಜನರ ನೋಂದಣಿ
- ಸಮೀಕ್ಷೆ ಕಾರ್ಯ 31ರವರೆಗೆ ವಿಸ್ತರಣೆ
ಕನಕಗಿರಿ: ಮಾಜಿ ದೇವದಾಸಿಯರ ಕಲ್ಯಾಣಕ್ಕಾಗಿ ಅವರ ಸಾಮಾಜಿಕ, ಆರ್ಥಿಕ ಸ್ಥಿತಿಗತಿ ಕುರಿತಂತೆ ನಿಖರ ಮಾಹಿತಿ ಸಂಗ್ರಹಿಸಲು ನಡೆದ ಸಮೀಕ್ಷೆಯಲ್ಲಿ ಕನಕಗಿರಿ ಶಿಶು ಅಭಿವೃದ್ಧಿ ಕಾರ್ಯಾಲಯ ವ್ಯಾಪ್ತಿಯಲ್ಲಿ ಒಟ್ಟು 778 ಜನರು ನೋಂದಣಿಯಾಗಿದ್ದಾರೆ.
ಅನಾದಿ ಕಾಲದಿಂದಲೂ ಜಾರಿಯಲ್ಲಿದ್ದ ಅನಿಷ್ಠ ದೇವದಾಸಿ ಪದ್ಧತಿ ಹೋಗಲಾಡಿಸಿ ದೇವದಾಸಿಮುಕ್ತ ರಾಜ್ಯವನ್ನಾಗಿಸಲು 1982ರಲ್ಲಿ ಕರ್ನಾಟಕ ದೇವದಾಸಿಯರ ಸಮರ್ಪಣ ನಿಷೇಧ ಕಾಯ್ದೆ ಹಾಗೂ 2009ರಲ್ಲಿ ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ತಿದ್ದುಪಡಿ ಕಾಯ್ದೆಗಳನ್ನು ಜಾರಿಗೆ ತರಲಾಗಿದೆ. ವಿಮುಕ್ತ ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯದಲ್ಲಿ 1993-94ರಲ್ಲಿ ಮೊದಲ ಸಮೀಕ್ಷೆ ನಡೆದಿದ್ದು, 2007-08ರಲ್ಲಿ ಎರಡನೇ ಸಮೀಕ್ಷೆ ನಡೆಸಲಾಗಿದೆ.
ಪ್ರಸ್ತುತ ಕಾಯ್ದೆಯಲ್ಲಿ ಬದಲಾವಣೆ ತಂದು ದೇವದಾಸಿಯರಿಗಾಗುತ್ತಿರುವ ಶೋಷಣೆ ತಡೆಗಟ್ಟಿ ಮಹಿಳಾ ಸಬಲೀಕರಣ ಹಾಗೂ ಸಾಮಾಜಿಕ ಗೌರವ ತರುವ ನಿಟ್ಟಿನಲ್ಲಿ ಆ.20ರಂದು ಮಸೂದೆಯಾಗಿ ಅಂಗೀಕಾರವಾಗಿದ್ದು, ಅದರಂತೆ 2025ರಲ್ಲಿ ಮರು ಸಮೀಕ್ಷೆ ನಡೆಸಲಾಗುತ್ತಿದ್ದು, ಕೊಪ್ಪಳ ಜಿಲ್ಲೆಯಲ್ಲಿ ಒಟ್ಟು 6018 ದೇವದಾಸಿಯರು ನೋಂದಣಿಯಾಗಿದ್ದಾರೆ.
ಗೌಪ್ಯ ಸಮಿತಿ ರಚನೆ
ಹಿಂದಿನ ಸಮೀಕ್ಷೆಯಲ್ಲಿದ್ದು, ಪ್ರಸ್ತುತ ಮರಣ ಹೊಂದಿರುವ ಮಹಿಳೆಯ ಕುಟುಂಬ ಸದಸ್ಯರು ನಮೂನೆ 1ರಲ್ಲಿ ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದಾಗಿದ್ದು, ಹಿಂದಿನ ಸಮೀಕ್ಷೆಯಲ್ಲಿ ಹೊರಗುಳಿದು ಪ್ರಸ್ತುತ ಜೀವಂತವಿರುವ ದೇವದಾಸಿ ಮಹಿಳೆಯರ ಪಟ್ಟಿಗೆ ಸೇರಲು ವಯಸ್ಸಿನ ದೃಢೀಕರಣ ಪತ್ರದೊಂದಿಗೆ ಇತರ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಲು ಡಿ.31ರವರೆಗೆ ಅವಕಾಶ ನೀಡಲಾಗಿದೆ. ದೇವದಾಸಿಯರ ವಾರಸುದಾರರು ಸರ್ಕಾರದಿಂದ ದೊರೆಯಬೇಕಾದ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಿದ ಬಳಿಕ ಸತ್ಯಾಸತ್ಯೆ ಅರಿಯಲು ಇಲಾಖೆ ರಚಿಸಿದ ಗೌಪ್ಯ ಸಮಿತಿಯಿಂದ ವರದಿ ಪಡೆದು ಜಿಲ್ಲಾಧಿಕಾರಿಗೆ ಸಲ್ಲಿಸಲಾಗುತ್ತದೆ. ಅಲ್ಲಿಂದ ದೊರೆತ ಆದೇಶದಿಂದ ಅರ್ಜಿ ಸಲ್ಲಿಸಿ ಸೌಲಭ್ಯ ಪಡೆದುಕೊಳ್ಳಬಹುದು.
ಅರ್ಜಿ ಸಂಖ್ಯೆ ಹೆಚ್ಚಳ ಸಾಧ್ಯತೆ
ಸರ್ವೇ ಬಳಿಕ ಕನಕಗಿರಿ ತಾಲೂಕಿನಲ್ಲಿ 13 ಹಾಗೂ ಕಾರಟಗಿ ತಾಲೂಕು ವ್ಯಾಪ್ತಿಯಲ್ಲಿ 34 ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನು ಅರ್ಜಿ ಸಲ್ಲಿಕೆಗೆ ಅವಕಾಶವಿರುವುದರಿಂದ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.
ಮಾಜಿ ದೇವದಾಸಿಯರ ತಾಲೂಕುವಾರು ಅಂಕಿಅಂಶ
ತಾಲೂಕು ಜೀವಂತ ಮರಣ ವಲಸೆ ಒಟ್ಟು
ಮಾಜಿ ದೇವದಾಸಿಯರಿಗೆ ಪುನರ್ವಸತಿ ಸೇರಿ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸುವ ನಿಟ್ಟಿನಲ್ಲಿ ಪ್ರಸ್ತುತ ನಡೆಯುತ್ತಿರುವ ಸರ್ವೇ ಸಹಕಾರಿಯಾಗಿದೆ.