ಕಾರಟಗಿ ತಾಲೂಕಿನ ಮೈಲಾಪುರ ಬಳಿ ಎಡದಂಡೆ ಕಾಲುವೆ ಗೋಡೆ ಕುಸಿದಿರುವುದು.  
ಕೊಪ್ಪಳ

ಎಡದಂಡೆ ನಾಲೆಗೆ ಬೇಕು ತುರ್ತು ಚಿಕಿತ್ಸೆ

ಪ್ರಮುಖ ಮುಖ್ಯಾಂಶಗಳು

  • ಕಡತದಲ್ಲೇ ಉಳಿದ ಸಮಿತಿ ವರದಿ
  • ಅನುದಾನ ನೀಡದ ಸರ್ಕಾರ

ಕೊಪ್ಪಳ : ""ನನಗೂ ತಾಯಿ ತುಂಗಭದ್ರೆಗೆ ಆದಷ್ಟೇ ವಯಸ್ಸಾಗಿದೆ. ಕಳೆದ 70 ವರ್ಷದಿಂದ ನನ್ನ ನಂಬಿದ ಅನ್ನದಾತರು, ಜಲಚರಗಳಿಗೆ ನೀರುಣಿಸಿದ್ದೇನೆ. ನನಗೂ ವಯಸ್ಸಾಗಿದೆ. ನಾನಾದರೂ ಏನು ಮಾಡಲಿ ? ನನ್ನೊಡಲಿಗೆ ಅಲ್ಲಲ್ಲಿ ರಂಧ್ರ ಬಿದ್ದಿವೆ. ತಡೆಗೋಡೆಗಳೆಂಬ ಎಡ&ಬಲ ಕೈಗಳ ಎಲುಬು ಮುರಿದಿವೆ. ಕಾಲ ಕಾಲಕ್ಕೆ ಸೂಕ್ತ ನಿರ್ವಹಣೆ ಮಾಡಿದ್ದರೆ ಹೊಸತರಂತೆ ನೀರುಣಿಸುತ್ತಿದ್ದೆ. ದಯಮಾಡಿ ನನಗಿಷ್ಟು ರಿಪೇರಿ ಎಂಬ ಚಿಕಿತ್ಸೆ ನೀಡಿ. ನನ್ನ ಕರ್ತವ್ಯ ಮುಂದುವರೆಸುವೆ...''

ಇದು ರಾಯಚೂರು&ಕೊಪ್ಪಳ ಜಿಲ್ಲೆಗಳಿಗೆ ಜೀವನಾಡಿ ತುಂಗಭದ್ರೆ ನೀರುಣಿಸುವ ಎಡದಂಡೆ ನಾಲೆ ಆರ್ತನಾದ. 1955ರಲ್ಲಿ ಜಲಾಶಯ ಲೋಕಾರ್ಪಣೆ ವೇಳೆ ನಿರ್ಮಾಣಗೊಂಡ ಕಾಲುವೆ. ಇಂದಿಗೂ ಎಂದಿನಂತೆ ನೀರುಣಿಸುತ್ತಿದೆ. ಆಳುವ ಸರ್ಕಾರಗಳ ದಿವ್ಯ ರ್ನಿಲಕ್ಷ$್ಯಕ್ಕೆ ತುತ್ತಾಗಿ ಸೊರಗಿ ಸವಕಲಾಗುತ್ತಿದೆ. 227 ಕಿ.ಮೀ. ಉದ್ದದವರೆಗೆ ನೀರುಣಿಸುತ್ತಿದ್ದು, 6&7 ಲಕ್ಷ ಎಕರೆ ಪ್ರದೇಶಕ್ಕೆ ನೀರಾವರಿಗೆ ಆಸರೆಯಾಗಿದೆ. ಎರಡೂ ಜಿಲ್ಲೆಗಳ ಲಾಂತರ ಜನರಿಗೆ ಕುಡಿವ ನೀರು, ನೂರಾರು ಕೈಗಾರಿಕೆಗಳು, ಜಾನುವಾರುಗಳಿಗೆ ಜೀವಜಲ ಒದಗಿಸುತ್ತಿದೆ.
ಆದರೆ, ಕಾಲಕಾಲಕ್ಕೆ ನಾಲೆ ಆಧುನೀಕರಣಗೊಳ್ಳುತ್ತಿಲ್ಲ. ಈ ಭಾಗದ ಜನಪ್ರತಿನಿಧಿಗಳು ಸರ್ಕಾರವನ್ನು ಮೂಗು ಹಿಡಿದು ಅನುದಾನ ಕೇಳುತ್ತಿಲ್ಲ. ಪರಿಣಾಮ ಕಾಲುವೆ ಮೇಲಾಗುತ್ತಿದ್ದು, ವರ್ಷದಿಂದ ವರ್ಷಕ್ಕೆ ನೀರು ಹೊತ್ತುಯ್ಯುವ ಸಾಮರ್ಥ್ಯ ಕುಸಿಯುತ್ತಿದೆ. ನೂರಾರು ಕಿ.ಮೀ.ಇರುವ ಕಾಲುವೆಯಲ್ಲಿ ಗುರುತ್ವಾಕರ್ಷಣೆ ಮೂಲಕವೇ ನೀರು ಹರಿಯುತ್ತಿದೆ. ನೆಲಮಟ್ಟದಿಂದ ಮೇಲ್ಭಾಗದಲ್ಲಿ ಕಾಲುವೆ ಇದ್ದು, ಅಲ್ಲಲ್ಲಿ ಟನಲ್​, ಅಕ್ವಡಕ್ಟ್​ಗಳನ್ನು ನಿರ್ಮಿಸಲಾಗಿದೆ. 4 ಸಾವಿರ ಕ್ಯೂಸೆಕ್​ ನೀರು ಹೊತ್ತೊಯ್ಯುವ ಶಕ್ತಿ ಹೊಂದಿದೆ.
ಆಗಿನ ಕಾಲದಲ್ಲಿ ಕೆವಲ ಮಣ್ಣು ಬಳಸಿ ಕಾಲುವೆ ನಿರ್ಮಿಸಲಾಗಿದೆ. 2009ರಲ್ಲಿ ಬಿ.ಎಸ್​.ಯಡಿಯೂರಪ್ಪ ಅವಧಿಯಲ್ಲಿ ಎರಡೂ ಬದಿ ಆರ್​ಸಿಸಿ ಬಳಿಸಿ ತಡೆಗೋಡೆ ನಿರ್ಮಿಸಲಾಗಿದೆ. ಅಲ್ಲಿಂದ ಈವರೆಗೂ ಮತ್ತೆ ಅಭಿವೃದ್ಧಿ ಮಾಡಿಲ್ಲ. ನಿವೃತ್ತ ಇಂಜಿನಿಯರ್​ಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಎರಡು ವರ್ಷದ ಹಿಂದಯೇ ವರದಿ ಸಲ್ಲಿಕೆ ಮಾಡಿದೆ. ಹೀಗಿದ್ದರೂ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ದೊಡ್ಡ ಅನಾಹುತ ಸಂಭವಿಸುವವರೆಗೆ ಅಸಡ್ಡೆ ಮುಂದುವರೆಸುವಂತೆ ತೋರುತ್ತಿದೆ.

ತುರ್ತು ಚಿಕಿತ್ಸೆ ಅಗತ್ಯ

ನಾಲೆ ಪರಿವೀಕ್ಷಣೆ ನಡೆಸಿದ ತಜ್ಞರ ತಂಡ ಅಲ್ಲಲ್ಲಿ ಸಂಪೂರ್ಣ ಶಿಥಿಲಾವಸ್ಥೆ ತಲುಪಿರುವುದನ್ನು ಗುರುತಿಸಿದೆ. ಪ್ರಮುಖ ಅಕ್ವಡೆಕ್ಟ್​ಗಳು, ಪಾಪಯ್ಯ ಟನಲ್​, ಪ್ರಮುಖ ಕಡೆಗಳಲ್ಲಿ ಕಾಲುವೆ ಎಡ&ಬಲ ಬದಿ ತೆರವುಗೊಳಿಸಬೇಕು. ಹೊಸದಾಗಿ ನಿರ್ಮಿಸಬೇಕು. ಏಕಕಾಲಕ್ಕೆ ಮಾಡಲು ಆಗದಿದ್ದರೂ ಅತಿ ತುರ್ತು, ತುರ್ತು ಹಾಗೂ ಸಾಮಾನ್ಯ ಎಂದು ಮೂರು ಭಾಗಗಳಾಗಿ ವಿಂಗಡಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಲಹೆ ನೀಡಿದೆ. ಇದಕ್ಕಾಗಿ 400 ಕೋಟಿ ರೂ. ಅನುದಾನ ಅಗತ್ಯವೆಂದು ವರದಿ ಸಲ್ಲಿಕೆ ಮಾಡಿದೆ. ಕಾಲುವೆ ಒಡೆದಾಗಲೊಮ್ಮೆ ರಿಪೋರ್ಟ್​ ನೆನಪಿಸಿಕೊಳ್ಳುವ ಅಧಿಕಾರಿಗಳು, ಸರ್ಕಾರ ಅದನ್ನು ಕಡತಕ್ಕೆ ಸೀಮಿತಗೊಳಿಸಿದೆ.

ಅವಡಗಳು ನಿರಂತರ

ನಾಲೆಗೆ ಬೋಂಗಾ ಬೀಳುವುದು, ಒಡೆಯುವುದು, ಕುಸಿಯುವುದು ಸಾಮಾನ್ಯ ಎಂಬಂತಾಗಿದೆ. ಸಣ್ಣ ಪ್ರಮಾಣದ ರಂಧ್ರ ಬಿದ್ದಾಗಲೇ ರೈತರು ಎಚ್ಚರಿಸಿದರೂ ಅಧಿಕಾರಿಗಳು ರಿಪೇರಿ ಮಾಡುವ ಮನಸ್ಸು ಮಾಡುತ್ತಿಲ್ಲ. ದಿವ್ಯ ರ್ನಿಲಕ್ಷ$್ಯದಿಂದ ಕಾಲುವೆ ಒಡೆದು ಅನಾಹುತ ಸಂಭವಿಸಿದ ಮೇಲೆಯೇ ದುರಸ್ತಿ ಕಾಣಬೇಕಾದ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದೊಂದು ವರ್ಷದಲ್ಲಿ 7-8 ಬಾರಿ ಅಲ್ಲಲ್ಲಿ ಕಾಲುವೆ ಒಡೆದಿದೆ. ಕಳೆದ ವರ್ಷ ಕೊಪ್ಪಳ ತಾಲೂಕಿನ ಬಸಾಪುರ ಬಳಿ ಕಾಲುವೆ ಒಡೆದು ಅಪಾರ ಹಾನಿಯಾಗಿದೆ. ಇದೀಗ ಕಾರಟಗಿ ತಾಲೂಕಿನ ಮೈಲಾಪುರ ಬಳಿ ಮೈಲ್​ 46ರಲ್ಲಿ ಕಾಲುವೆ ಗೋಡೆ ಕುಸಿದು ಹಲವು ದಿನ ಕಳೆದಿವೆ. ಈ ಬಗ್ಗೆ ರೈತರು ಗಮನಕ್ಕೆ ತಂದರೂ ಅಸಡ್ಡೆ ತೋರಿದ ಅಧಿಕಾರಿಗಳು ಇದೀಗ ಕಾಮಗಾರಿ ಆರಂಭಿಸಿದ್ದಾರೆ.