ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿ ಭಕ್ತರು ಮಠಕ್ಕೆ ಸಲ್ಲಿಸುವ ಸೇವೆ ನೆನೆದು ಸೋಮವಾರ ಭಾವುಕರಾಗಿ ಕಣ್ಣೀರಾದರು. 
ಕೊಪ್ಪಳ

ದಾಸೋಹಕ್ಕೆ ಕೊತ್ತಂಬರಿ ಸೊಪ್ಪು ನೀಡಿದ ಅಜ್ಜಿ

ಪ್ರಮುಖ ಮುಖ್ಯಾಂಶಗಳು

  • ಊಟ ಬಿಟ್ಟು ಧಾನ್ಯ ನೀಡಿದ ಬಂಧಿಗಳು
  • ಭಕ್ತರ ಪ್ರೀತಿ ಕಂಡು ಭಾವುಕರಾದ ಸ್ವಾಮೀಜಿ
ಕೊಪ್ಪಳ: ಗವಿಸಿದ್ಧೇಶ್ವರ ಜಾತ್ರೆ ಎಂದರೆ ವಿಶೇಷ. ಇದು ಭಕ್ತರ ಸಂಭ್ರಮ ಹಾಗೂ ಸೇವೆಯ ಪ್ರತೀಕ. ಇದಕ್ಕೆ ಪ್ರತಿ ವರ್ಷವೂ ಒಂದಿಲ್ಲೊಂದು ನಿದರ್ಶನಗಳು ನಡೆಯುತ್ತಲೇ ಇರುತ್ತವೆ. ಈ ವರ್ಷ ಬೈಲಹೊಂಗಲದ ಅಜ್ಜಿಯೊಬ್ಬರು ಅಜ್ಜನ ಜಾತ್ರೆಯ ದಾಸೋಹಕ್ಕೆ ತಾವು ನಿತ್ಯ ಮಾರಾಟ ಮಾಡುವ ಕೊತ್ತಂಬರಿ ಸೊಪ್ಪನ್ನು ಅರ್ಪಿಸಿ ಭಕ್ತಿ ಮೆರೆದಿದ್ದಾರೆ. ಹಿರಿಯ ಚೇತನದ ಭಕ್ತಿಗೆ ಗವಿಶ್ರೀಗಳು ಕ್ಷಣಕಾಲ ಭಾವುಕರಾದರು.
ನಿತ್ಯ ಸೊಪ್ಪು ಮಾರಾಟ ಮಾಡಿ ಜೀವನ ನಡೆಸುವ ಈ ಅಜ್ಜಿ, ಗವಿಶ್ರೀಗಳ ಪ್ರವಚನ ಹಾಗೂ ಹಿತ ನುಡಿಗಳನ್ನು ಮೊಬೈಲ್‌ನಲ್ಲಿ ನೋಡುತ್ತಾರೆ. ಅವರ ನುಡಿಗಳಿಂದ ಪ್ರೇರಿತರಾಗಿ ತಮ್ಮ ಸ್ವಂತ ಕಾಲ ಮೇಲೆ ನಿಂತು ಜೀವನ ಸಾಗಿಸುತ್ತಿದ್ದಾರೆ. ಜಾತ್ರೆಯಲ್ಲಿ ಲಕ್ಷಾಂತರ ಭಕ್ತರಿಗೆ ದಾಸೋಹ ಇರುತ್ತದೆ. ಅದಕ್ಕೆ ತಮ್ಮದೂ ಸೇವೆ ಇರಲಿ ಎಂದು ಬೈಲಹೊಂಗಲದಿಂದ ಒಂದು ಬುಟ್ಟಿ ಕೊತ್ತಂಬರಿ ಸೊಪ್ಪು ತಂದು ಅರ್ಪಿಸಿ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.
ಇದೇ ವೇಳೆ ಕೊಪ್ಪಳದ ಕೇಂದ್ರ ಕಾರಾಗೃಹದ ವಿಚಾರಣಾಧೀನ ಬಂಧಿಗಳು ಶ್ರೀಗಳ ಮಾತಿನಿಂದ ಪ್ರೇರಿತರಾಗಿ ತಮ್ಮ ಒಂದು ಒಪ್ಪೊತ್ತಿನ ಊಟವನ್ನು ತ್ಯಜಿಸಿ ದವಸ-ಧಾನ್ಯಗಳನ್ನು ದಾಸೋಹಕ್ಕೆ ನೀಡಿದ್ದಾರೆ. ಭಕ್ತರ ಈ ಪ್ರೀತಿಯನ್ನು ನೆನೆದು ಗವಿಶ್ರೀಗಳು ಭಾವುಕರಾದರು. ಅಜ್ಜ ಎಲ್ಲವನ್ನೂ ಕೈ ಹಿಡಿದು ನಡೆಸುತ್ತಾನೆ. ಇಂತಹ ಭಕ್ತರಿಂದಲೇ ಮಠದ ಹೆಸರು ಉಳಿಯುತ್ತದೆ ಎಂದು ಭಾವನೆಗಳನ್ನು ನಿಯಂತ್ರಿಸಲಾಗದೆ ಕಣ್ಣೀರಾದರು.
ಗವಿಶ್ರೀಗಳು ಕಾರಾಗೃಹದ ಕಾರ್ಯಕ್ರಮಕ್ಕೆ ತೆರಳಿದಾಗ ಬದಲಾಗುವಂತೆ ಆಶೀರ್ವಚನ ನೀಡಿದ್ದರು. ಅದರಿಂದ ಪ್ರೇರಿತರಾದ ಬಂಧಿಗಳು ಬದಲಾಗುವುದಾಗಿ ಶಪಥ ಮಾಡಿದ್ದಾರೆ.
"

ಜನರ ಪ್ರೀತಿ, ಸೇವಾ ಮನೋಭಾವ, ಕಕ್ಕುಲಾತಿ ಹಾಗೂ ಭಕ್ತಿಗೆ ಎಷ್ಟು ಹೇಳಿದರೂ ಸಾಲದು. ಇವರಿಂದಲೇ ಜಾತ್ರೆ ಯಶಸ್ಸು. ಸಮಾಜದಲ್ಲಿ ನಕಾರಾತ್ಮಕತೆ ಹೆಚ್ಚುತ್ತಿದೆ. ಹಾಗೆಂದು ಜವಾಬ್ದಾರಿ ಸ್ಥಾನದಲ್ಲಿರುವವರು ಸುಮ್ಮನಿರಬಾರದು. ಸಕಾರಾತ್ಮಕತೆ ಬೆಳೆಸಬೇಕು.