ತಾಯಿ ಶಾರದಮ್ಮ ಹಾಗೂ ಮಗುವಿನೊಂದಿಗೆ ವೈದ್ಯರಾದ ಡಾ. ಶರಣಬಸವ ಬಿ, ಡಾ. ಶರಣಪ್ಪ ಸಿಂಗನಾಳ ಹಾಗೂ ಸಿಬ್ಬಂದಿ ರಾಘವೇಂದ್ರ ಇತರರಿದ್ದರು.
- ಉಸಿರುಗಟ್ಟುವಿಕೆ ಸಮಸ್ಯೆಯೊಂದಿಗೆ ಜನಿಸಿದ ನವಜಾತ ಶಿಶು
- ಕನಕಗಿರಿ ಸಮುದಾಯ ಆರೋಗ್ಯ ಕೇಂದ್ರದ ಯಶಸ್ವಿ ಚಿಕಿತ್ಸೆ
ಕನಕಗಿರಿ: ಅಪರೂಪದ ಬರ್ತ್ ಆಸ್ಪಿಕ್ಸಿಯಾ (ಹುಟ್ಟು ಉಸಿರುಗಟ್ಟುವಿಕೆ) ಸಮಸ್ಯೆಯೊಂದಿಗೆ ಜನಿಸಿದ ನವಜಾತ ಶಿಶುವೊಂದಕ್ಕೆ ಮೂರ್ಚೆ ರೋಗ ತಗುಲಿ ಸಾವು ಬದುಕಿನ ಹೋರಾಟ ನಡೆಸಿದ ಮಗುವನ್ನು ಸೌಲಭ್ಯಗಳ ಕೊರತೆಯ ನಡುವೆ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ವೈದ್ಯರು ಮೊದಲ ಬಾರಿಗೆ ಕೈಗೆತ್ತಿಕೊಂಡು ಬದುಕಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಶಾರದಮ್ಮ ಅವರು ಎರಡನೇ ಹೆರಿಗೆಗೆಂದು ಗಂಡನ ಮನೆಯಾದ ಗಾಣದಾಳ ಗ್ರಾಮದಿಂದ ತವರು ಗ್ರಾಮವಾದ ತಾಲೂಕಿನ ಸಿರಿವಾರ ಗ್ರಾಮಕ್ಕೆ ಬಂದಿದ್ದಾರೆ. 2025ರ ಡಿ.31ಕ್ಕೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬಂದು ದಾಖಲಾಗಿದ್ದಾಳೆ. ಮಧ್ಯಾಹ್ನ 3.13ರ ಸುಮಾರಿಗೆ ಶಾರದಮ್ಮಳಿಗೆ ಸಾಮಾನ್ಯ ಹೆರಿಗೆಯಾಗಿದ್ದು, ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಹುಟ್ಟಿದ ಕೂಸು ಉಸಿರಾಟದ ಪ್ರಯತ್ನವಿಲ್ಲದೇ ಜನಿಸಿದ್ದು, ಇದರಿಂದ ಕೂಡಲೇ ಪ್ರವೃತ್ತರಾದ ಮಕ್ಕಳ ತಜ್ಞ ಬ್ಯಾಗ್ ಆಂಡ್ ಮಾಸ್ಕ್ ವಾತಾಯನದ ಮೂಲಕ ಉಸಿರಾಡುವಂತೆ ಮಾಡಿದ್ದಾರೆ. ಬಳಿಕ ಹಸುಗೂಸಿಗೆ ಪೀಡ್ಸ್ ಆರಂಭವಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಬೇರೆಡೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಶಿಫಾರಸು ಮಾಡಿದ್ದಾರೆ. ಆದರೆ, ಮಗುವಿಗೆ ಇಲ್ಲಿಯೇ ಚಿಕಿತ್ಸೆ ಕೊಡುವಂತೆ ಪಾಲಕರು ಒತ್ತಾಯಿಸಿದ್ದಾರೆ. ವೈದ್ಯರು ಸೌಲಭ್ಯಗಳ ಕೊರತೆಯ ನಡುವೆ ಧೈರ್ಯದಿಂದ ಚಿಕಿತ್ಸೆ ಆರಂಭಿಸಿ ಯಶಸ್ವಿಯಾಗಿದ್ದಾರೆ.
ಮಗು ಜನಿಸಿದ ವೇಳೆಯಲ್ಲಿ ಸಮಸ್ಯೆಯಲ್ಲಿತ್ತು. ವೈದ್ಯರು ಮಗುವನ್ನು ಕರೆದುಕೊಂಡು ಹೆಚ್ಚಿನ ಚಿಕಿತ್ಸೆಗೆ ಬೇರೆ ಆಸ್ಪತ್ರೆಗೆ ತೆರಳುವಂತೆ ಶಿಫಾರಸು ಮಾಡಿದರು. ನಾವು ಹೋಗಲು ಹಿಂದೇಟು ಹಾಕಿ ಇಲ್ಲಿಯೇ ಚಿಕಿತ್ಸೆ ಕೊಡಿಸುವಂತೆ ಒತ್ತಾಯಿಸಿದೆವು. ವೈದ್ಯರು ಹಾಗೂ ಸಿಬ್ಬಂದಿಯ ಶ್ರಮದಿಂದ ಮಗು ಗುಣಮುಖವಾಗಿದೆ.
ಸುವ್ಯಸ್ಥಿತ ಸೌಲಭ್ಯಗಳಿರುವ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಗಳಲ್ಲಿ ಇಂಥ ಮಗುವಿಗೆ ಚಿಕಿತ್ಸೆ ಕೊಟ್ಟಿದ್ದೇವೆ. ಆದರೆ, ಮೊದಲ ಬಾರಿಗೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಕೊಡುವಾಗ ಸವಾಲಾಗಿದ್ದು, ಡಿ.31 ರಾತ್ರಿ ಚಲನ ವಲನದ ಬಗ್ಗೆ ಮಾಹಿತಿ ಪಡೆಯುವುದರಲ್ಲೇ ಕಳದೆ. ಮಗು ಗುಣಮುಖವಾಗಿರುವುದು ಸಂತಸ ತಂದಿದೆ.