ಕನಕಗಿರಿಯ ಗಜಲಕ್ಷ್ಮೀ ದೇವಸ್ಥಾನದ ಮುಂಭಾಗದಲ್ಲಿ ಅಲಾಯಿ ದೇವರುಗಳು ಶುಕ್ರವಾರ ಸಂಜೆ ಪರಸ್ಪರ ಆಲಂಗಿಸಿಕೊಂಡು ಹಬ್ಬಕ್ಕೆ ವಿದಾಯ ಹೇಳಿದವು.  
ಕೊಪ್ಪಳ

ಪೀರಲು ದೇವರುಗಳ ವಿಸರ್ಜನೆ ವಿಧ್ಯುಕ್ತ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಕನಕಾಚಲ ದೇವಸ್ಥಾನಕ್ಕೆ ಭೇಟಿ ನೀಡಿ ಸಾಮರಸ್ಯ ಮೆರೆದ ದೈವಗಳು
ಕನಕಗಿರಿ: ಮೊಹರಂ ಹಬ್ಬದ ನಿಮಿತ್ತ ಪಟ್ಟಣ ಸೇರಿ ತಾಲೂಕಿನ ಗ್ರಾಮೀಣ ಭಾಗದ ನಾನಾ ಮಸೀದಿಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರುಗಳಿಗೆ ಶುಕ್ರವಾರ ಸಂಜೆ ಅದ್ದೂರಿ ವಿದಾಯ ಹೇಳಲಾಯಿತು.
ಪಟ್ಟಣದ ಮಸೀದಿಗಳಲ್ಲಿನ ಪಿರಲು ದೇವರುಗಳಾದ ಹಟೇಲಬಾಷಾ, ಹುಸೇನಬಾಷಾ, ಹೊನ್ನೂರಬಾಷಾ, ಹಸೇನಬಾಷಾ, ಲಾಲಾಸಾಬ್, ಮೌಲಾಲಿ ಸೇರಿ ಇತರ ದೇವರುಗಳು ಹಬ್ಬದ ಕೊನೆಯ ದಿನವಾದ ಶುಕ್ರವಾರ ಸಂಜೆ ಇಲ್ಲಿನ ರಾಜಬೀದಿಯಲ್ಲಿನ ಗಜಲಕ್ಷ್ಮೀ ದೇವಸ್ಥಾನ ಮುಂಭಾಗದಲ್ಲಿ ಸೇರಿ ಒಂದನ್ನೊಂದು ಆಲಂಗಿಸಿಕೊಂಡವು. ಬಳಿಕ ವಿಸರ್ಜನೆಗಾಗಿ ಹಳ್ಳಕ್ಕೆ ತೆರಳುವ ಮೂಲಕ ಹಬ್ಬಕ್ಕೆ ವಿಧ್ಯುಕ್ತ ವಿದಾಯ ಹೇಳಿದವು.
ಇದಕ್ಕೂ ಮೊದಲು ಅಲಾಯಿ ದೇವರುಗಳು ಭಕ್ತರ ಮನೆ ಮನೆಗೆ ತೆರಳಿ ಹರಕೆ ತೀರಿಸಿದವು. ಪಿರಲು ದೇವರುಗಳ ವಿಸರ್ಜನೆ ನಿಮಿತ್ತ ಗಜಲಕ್ಷ್ಮೀ ದೇವಸ್ಥಾನ ಮುಂಭಾಗದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ನೆರೆದಿದ್ದರು. ಯುವಕರು ಹಲಗೆ ಬಾರಿಸುತ್ತಾ ಅಲಾಯಿ ಕುಣಿದರು. ರಸ್ತೆಯ ಇಕ್ಕೆಲಗಳಲ್ಲಿನ ಅಂಗಡಿ, ಮನೆಗಳ ಮಾಳಿಗೆಗಳ ಮೇಲೆ ಮಹಿಳೆಯರು ನೆರೆದಿದ್ದು, ಅಲಾಯಿ ದೇವರುಗಳ ವಿಸರ್ಜನೆಯ ಸನ್ನಿವೇಶವನ್ನು ಕಣ್ತುಂಬಿಕೊಂಡರು.

ಸಚಿವ ಸ್ಥಾನಕ್ಕಾಗಿ ತಂಗಡಗಿ ಪತ್ನಿ ಹರಕೆ

ಶಾಸಕ ಶಿವರಾಜ ತಂಗಡಗಿ ಪತ್ನಿ ವಿದ್ಯಾ ತಂಗಡಗಿ ಗುರುವಾರ ರಾತ್ರಿ ತಾಲೂಕಿನ ಕನ್ನೇರಮಡು ಗ್ರಾಮಕ್ಕೆ ತೆರಳಿ ಮಸೀದಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಅಲಾಯಿ ದೇವರಿಗೆ ಸಕ್ಕರೆ ನೈವೇದ್ಯ ಅರ್ಪಿಸಿದರು. ಕಳೆದ ಚುನಾವಣೆ ಪೂರ್ವದಲ್ಲಿ ತಮ್ಮ ಪತಿ ಶಿವರಾಜ ತಂಗಡಗಿ ಗೆಲುವು ಸಾಧಿಸಲೆಂದು ಬೇಡಿಕೊಂಡಿದ್ದರು. ಆ ಹರಕೆಯನ್ನು ಪ್ರಸಕ್ತ ವರ್ಷದ ಮೊಹರಂನಲ್ಲಿ ತೀರಿಸಿದ್ದಾರೆ. ಇದಲ್ಲದೇ ತಮ್ಮ ಪತಿಗೆ ಸಚಿವ ಸ್ಥಾನ ಸಿಗಲೆಂದು ಬೇಡಿಕೊಂಡಿದ್ದಾರೆ ಎನ್ನುವ ಮಾತುಗಳು ಕೇಳಿಬಂದಿವೆ.