ಗಂಗಾವತಿ ಕಲ್ಮಠದದಲ್ಲಿ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಂಗಲೋತ್ಸವದಲ್ಲಿ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು. ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ಹಿರೇನಾಗಾವಿ ಜಯಶಾಂತಲಿಂಗ ಸ್ವಾಮೀಜಿ, ಕಮತಗಿ, ಕೋಟೆಕಲ್ ಹುಚ್ಚೇಶ್ವರ ಸ್ವಾಮೀಜಿ ಇತರರಿದ್ದರು.
- ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಶೀರ್ವಚನ
- ಗಂಗಾವತಿ ಕಲ್ಮಠದಲ್ಲಿ ಶರಣ ಸಂಸ್ಕೃತಿ ಮಂಗಲೋತ್ಸವ
ಗಂಗಾವತಿ: ಭತ್ತದ ನಾಡಿನಲ್ಲಿ ಆಧ್ಯಾತ್ಮಿಕ ಮತ್ತು ಧಾರ್ಮಿಕ ಚಟುವಟಿಕೆ ನಿರಂತರವಾಗಿದ್ದು, ಶೈಕ್ಷಣಿಕ ಕ್ಷೇತ್ರದ ಬೆಳವಣಿಗೆಯಲ್ಲಿ ಕಲ್ಮಠದ ಪಾತ್ರ ಪ್ರಮುಖವಾಗಿದೆ ಎಂದು ಶಿರಹಟ್ಟಿ ಕೀರೇಶ್ವರ ಸಂಸ್ಥಾನ ಭಾವೈಕ್ಯತೆ ಪೀಠಾಧಿಪತಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.
ಕಲ್ಮಠದ ಪುರಾಣ ಮಂಟಪದಲ್ಲಿ ಶ್ರೀ ಕೊಟ್ಟೂರೇಶ್ವರ ಮಹಾಶಿವಯೋಗಿಗಳ ಸ್ಮರಣೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಶರಣ ಸಂಸ್ಕೃತಿ ಮಂಗಲೋತ್ಸವದಲ್ಲಿ ಮಾತನಾಡಿದರು. ಸಂಸ್ಕೃತಿ ಮತ್ತು ಸನಾತನ ಧರ್ಮ ಸಂರಕ್ಷಣೆಯಲ್ಲಿ ಮಠ ಮಾನ್ಯಗಳ ಕೊಡುಗೆ ಸಾಕಷ್ಟಿದ್ದು, ವೀರಶೈವ ಲಿಂಗಾಯತ ಸಮಾಜದ ಅಭಿವೃದ್ಧಿಯಲ್ಲಿ ಹಾನಗಲ್ ಕುಮಾರೇಶ್ವರ ಶ್ರೀಗಳ ಪಾತ್ರ ಮಹತ್ವದ್ದಾಗಿದೆ. ಕಾಯಕ, ದಾಸೋಹದ ಜತೆಗೆ ಶೈಕ್ಷಣಿಕ ಸೇವೆಗೆ ಆದ್ಯತೆ ನೀಡಿರುವ ಕಲ್ಮಠದ ಸಾಧನೆ ಅವಿಸ್ಮರಣೀಯ ಎಂದರು.
ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ಮಾತನಾಡಿ, ಶ್ರೀಮಠದಲ್ಲಿ 11 ದಿನಗಳ ಕಾಲ ನಡೆದ ಪುರಾಣ ಪ್ರವಚನದ ಜತೆಗೆ ಧಾರ್ಮಿಕ ಕಾರ್ಯಕ್ರಮಗಳಿಗೆ ವಿವಿಧ ಮಠಾಧೀಶರು ಸಾಕ್ಷಿಯಾಗಿದ್ದಾರೆ ಎಂದರು.
ಚನ್ನಬಸವ ಶಿವಯೋಗಿಗಳ ಪುರಾಣ ಪ್ರವಚನದ ಮಹಾಮಂಗಲ ನೆರವೇರಿಸಲಾಯಿತು. ಹಿರೇನಾಗಾವಿ ಸಂಸ್ಥಾನಮಠದ ಜಯಶಾಂತಲಿಂಗ ಸ್ವಾಮೀಜಿ, ಕಮತಗಿ-ಕೋಟೆಕಲ್ ಹುಚ್ಚೇಶ್ವರ ಸಂಸ್ಥಾನ ಮಠದ ಹುಚ್ಚೇಶ್ವರ ಸ್ವಾಮೀಜಿ, ಅಮೀನಗಡ ಗಚ್ಚಿನಮಠದ ಶಂಕರ ರಾಜೇಂದ್ರ ಸ್ವಾಮೀಜಿ, ಅಕ್ಕಲಕೋಟೆ ವಿರಕ್ತಮಠದ ಬಸವಲಿಂಗ ಸ್ವಾಮೀಜಿ, ಪುರಾಣ ಪ್ರವಚನಕಾರ ಶಿವರಾಜ ಶಾಸಿ, ಶಿಕ್ಷಕ ಮುತ್ತನಗೌಡ ಪಾಟೀಲ್ ಇತರರಿದ್ದರು.