ಕೊಪ್ಪಳ ಕೇಂದ್ರಿಯ ಬಸ್ ನಿಲ್ದಾಣದ ಮುಂಬಾಗದಲ್ಲಿ ಸುಗಮ ಸಂಚಾರಕ್ಕಾಗಿ ಅಳವಡಿಸಿದ ಬ್ಯಾರಿಕೆಡ್ ಗಾಳಿಯ ರಬಸಕ್ಕೆ ನೆಲಕ್ಕೂರುಳಿರುವುದು.
- ಬಸ್ ನಿಲ್ದಾಣದ ಬಳಿ ಸಂಚಾರಕ್ಕೆ ತೊಡಕು
ಕೊಪ್ಪಳ : ನಗರದ ಹೃದಯಭಾಗದಲ್ಲಿರುವ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ ಅಳವಡಿಸಿದ್ದ ಬ್ಯಾರಿಕೇಡ್ಗಳು ಗಾಳಿಗೆ ನೆಲಕ್ಕುರುಳಿದ ಘಟನೆ ಮಂಗಳವಾರ ನಡೆದಿದೆ. ವಾಹನ ಸಂಚಾರದ ನಡುವೆ ಬ್ಯಾರಿಕೇಡ್ಗಳು ರಸ್ತೆಗೆ ಬಿದ್ದ ಪರಿಣಾಮ ವಾಹನ ಸವಾರರು ಆತಂಕಕ್ಕೆ ಒಳಗಾದರು.
ಬಸ್ ನಿಲ್ದಾಣದ ಸುತ್ತಮುತ್ತ ಏಕಮುಖ ಸಂಚಾರ ವ್ಯವಸ್ಥೆ ಜಾರಿಗೊಳಿಸುವ ಉದ್ದೇಶದಿಂದ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆರಂಭದಲ್ಲಿ ಸಂಚಾರ ನಿಯಂತ್ರಣಕ್ಕೆ ಇದು ನೆರವಾದರೂ, ಮೂಲ ಸಮಸ್ಯೆಗಳಾದ ಫುಟ್ಪಾತ್ ಒತ್ತುವರಿ, ಅಕ್ರಮ ಪಾರ್ಕಿಂಗ್ ಹಾಗೂ ರಸ್ತೆ ಬದಿಯ ವ್ಯಾಪಾರವನ್ನು ತೆರವುಗೊಳಿಸದೇ ಬ್ಯಾರಿಕೇಡ್ ಅಳವಡಿಸಿರುವುದರಿಂದ ಸಂಚಾರ ವ್ಯವಸ್ಥೆ ಮತಷ್ಟು ಸಂಕೀರ್ಣಗೊಂಡಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.
ಬಸ್ ನಿಲ್ದಾಣದ ಎರಡೂ ಬದಿಯ ಫುಟ್ಪಾತ್ಗಳು ಸಂಪೂರ್ಣ ಅತಿಕ್ರಮಣಕ್ಕೆ ಒಳಗಾಗಿವೆ. ರಸ್ತೆಯ ಅರ್ಧ ಭಾಗದಲ್ಲೇ ಕಾರು ಹಾಗೂ ದ್ವಿಚಕ್ರ ವಾಹನಗಳನ್ನು ಪಾರ್ಕ್ ಮಾಡಲಾಗುತ್ತಿದ್ದು, ಕೆಲ ವ್ಯಾಪಾರಿಗಳು ರಸ್ತೆಯಲ್ಲೇ ವ್ಯಾಪಾರ ನಡೆಸುತ್ತಿರುವುದರಿಂದ ವಾಹನಗಳ ಓಡಾಟಕ್ಕೆ ಲಭ್ಯವಿರುವ ಜಾಗ ಕುಗ್ಗುತ್ತಿದೆ. ಇದರಿಂದ ಬಸ್ಗಳು ಸೇರಿದಂತೆ ಬೃಹತ್ ವಾಹನಗಳು ಯೂ-ರ್ಟನ್ ಪಡೆಯಲು ಹರಸಾಹಸ ಪಡಬೇಕಾದ ಸ್ಥಿತಿ ನಿಮಾರ್ಣವಾಗಿದೆ.
ಸುಗಮ ಸಂಚಾರಕ್ಕಾಗಿ ಬ್ಯಾರಿಕೇಡ್ ಅಳವಡಿಸಿರುವುದು ಉತ್ತಮ ಉದ್ದೇಶ. ಆದರೆ ರಸ್ತೆ ಅಗಲವೇ ಕಡಿಮೆಯಿರುವ ಸಂದರ್ಭದಲ್ಲಿ ಫುಟ್ಪಾತ್ ಒತ್ತುವರಿ ಹಾಗೂ ಅಕ್ರಮ ಪಾರ್ಕಿಂಗ್ ತೆರವುಗೊಳಿಸದೆ ಬ್ಯಾರಿಕೇಡ್ ಹಾಕಿರುವುದರಿಂದ ಸಮಸ್ಯೆ ಕಡಿಮೆಯಾಗುವ ಬದಲು ಹೆಚ್ಚಾಗಿದೆ ಎಂದು ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಗಾಳಿಯ ರಭಸಕ್ಕೆ ಬ್ಯಾರಿಕೇಡ್ ನೆಲಕ್ಕುರುಳಿರುವುದು ಅವುಗಳ ಸ್ಥಿರತೆ ಹಾಗೂ ಸುರಕ್ಷತೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ವಾಹನ ಸಂಚಾರದ ಮಧ್ಯೆಯೇ ಬ್ಯಾರಿಕೇಡ್ ಬಿದ್ದಿರುವುದು ಅಪಾಯಕ್ಕೆ ಕಾರಣವಾಗಬಹುದಾಗಿದ್ದು, ತಾತ್ಕಾಲಿಕ ಬ್ಯಾರಿಕೇಡ್ಗಳ ಬದಲಾಗಿ ರಸ್ತೆ ಮಧ್ಯದಲ್ಲಿ ಶಾಶ್ವತ ಡಿವೈಡರ್ ನಿರ್ಮಿಸಬೇಕು. ಜೊತೆಗೆ ಫುಟ್ಪಾತ್ ಒತ್ತುವರಿ ತೆರವುಗೊಳಿಸಿ ಅಕ್ರಮ ಪಾರ್ಕಿಂಗ್ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.