ಕೊಪ್ಪಳದಲ್ಲಿ ಆಯೋಜಿಸಿರುವ ಮಾವು ಮೇಳಕ್ಕೆ ವಿಪ ಸದಸ್ಯೆ ಹೇಮಲತಾ ನಾಯಕ ಚಾಲನೆ ನೀಡಿದರು. ಡಿಸಿ ಡಾ.ಸುರೇಶ ಬಿ.ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ತೋಟಗಾರಿಕೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ ಇದ್ದರು.
- 10ನೇ ವರ್ಷದ ಮಾವು ಮೇಳ-2026ಕ್ಕೆ ಚಾಲನೆ
ಕೊಪ್ಪಳ : ರೈತರಿಂದ ನೇರವಾಗಿ ಗ್ರಾಹಕರಿಗೆ ಗುಣಮಟ್ಟದ ಮಾವಿನ ಹಣ್ಣುಗಳನ್ನು ತಲುಪಿಸುವ ಉದ್ದೇಶದಿಂದ ತೋಟಗಾರಿಕೆ ಇಲಾಖೆಯಿಂದ ನಗರದ ತೋಟಗಾರಿಕೆ ಜಂಟಿ ನಿರ್ದೇಶಕರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿರುವ ಮಾವು ಮೇಳಕ್ಕೆ ಮಂಗಳವಾರ ಚಾಲನೆ ದೊರೆಯಿತು.
100ಕ್ಕೂ ಹೆಚ್ಚು ರೈತರು ಭಾಗವಹಿಸಿದ್ದು, 30ಕ್ಕೂ ಅಧಿಕ ಸ್ಟಾಲ್ಗಳನ್ನು ನೀಡಲಾಗಿದೆ. 10ಕ್ಕೂ ಹೆಚ್ಚು ರೈತ ಉತ್ಪಾದಕ ಕಂಪನಿಗಳು ಹಾಗೂ ಜಿಲ್ಲಾ ಹಾಪಕಾಮ್ಸ್ ಅಂಗಡಿ ಸಹ ಇದೆ. ಕೇಸರ್, ದಶಹರಿ, ಆಪೂಸ್, ಬೆನೆಶಾನ್, ಮಲ್ಲಿಕಾ, ಸಿಂಧೂರಿ, ಇಮಾಮ್ ಪಸಂದ್, ತೋತಾಪುರಿ, ರಸಪುರಿ, ಸ್ವರ್ಣರೇಖಾ ಸೇರಿ 200ಕ್ಕೂ ಅಧಿಕ ದೇಶಿ ಹಾಗೂ ವಿದೇಶಿ ತಳಿ ಮಾವು ಪ್ರದರ್ಶನ ಮತ್ತು ಮಾರಾಟಕ್ಕೆ ಇಡಲಾಗಿದೆ. ಮಾವಿನ ಉಪ್ಪಿನಕಾಯಿ, ಸೀಕರಣಿ, ಜ್ಯೂಸ್ ಹಲವು ಮೌಲ್ಯವರ್ಧಿತ ಉತ್ಪನ್ನಗಳು ಸಾರ್ವಜನಿರನ್ನು ಆಕರ್ಷಿಸುತ್ತಿವೆ.
ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಸದಸ್ಯೆ ಹೇಮಲತಾ ನಾಯಕ, ಡಿಸಿ ಡಾ.ಸುರೇಶ ಬಿ ಇಟ್ನಾಳ, ಜಿಪಂ ಸಿಇಒ ವರ್ಣಿತ್ ನೇಗಿ, ತೋಟಗಾರಿಕೆ ಜಂಟಿ ನಿರ್ದೇಶಕ ಕೃಷ್ಣ ಉಕ್ಕುಂದ, ಜಿಲ್ಲಾ ಹಾಪಕಾಮ್ಸ್ ಅಧ್ಯಕ್ಷ ಯಂಕಣ್ಣ ಯರಾಶಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಗೊಂಡಬಾಳ ಇತರರಿದ್ದರು.
ಮಿಯಾಜಾಕಿ ಆಕರ್ಷಣೆ
ಜಪಾನ್ ಮೂಲದ ವಿಶ್ವದ ದುಬಾರಿ ಮಾವು ಎಂದು ಖ್ಯಾತಿ ಪಡೆದ ಮೀಯಾಜಾಕಿ ತಳಿಯ ಮಾವು ಈ ಬಾರಿ ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ಲಕ್ಷಾಂತರ ರೂ. ಮೌಲ್ಯ ಹೊಂದಿರುವ ಮಾವು ಕೊಪ್ಪಳದ ರೈತರು ಬೆಳೆದಿದ್ದಾರೆ. ಪ್ರತಿ ಕೆಜಿಗೆ 2,500&3,000ರೂ. ದರ ನಿಗದಿಪಡಿಸಲಾಗಿದೆ. ಮಾವಿನ ಆಕೃತಿಯ ಆಕರ್ಷಕ ಸೆಲ್ಫಿ ಪಾಯಿಂಟ್ ಮಕ್ಕಳು ಹಾಗೂ ಸಾರ್ವಜನಿಕರನ್ನು ಸೆಳೆಯುತ್ತಿದೆ. ಕೊಪ್ಪಳ ಕೇಸರ್ ಮಾವು ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ.