ಅಂಗಡಿ ಮುಂದೆ ಹಾಕಲಾಗಿದ್ದ ದರ ಪಟ್ಟಿ 
ಕೊಪ್ಪಳ

ದರ ನಿಗದಿ ವಿಚಾರದಲ್ಲಿ ಜಟಾಪಟಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಟೆಂಡರ್‌ದಾರರಿಂದ ಕಾಯಿ ದರ ಏರಿಕೆ
  • ಕನಕಗಿರಿಯಲ್ಲಿ ಭಕ್ತರ ಜೇಬಿಗೆ ಕತ್ತರಿ
ಕನಕಗಿರಿ: ಪಟ್ಟಣದ ಐತಿಹಾಸಿಕ ಕನಕಾಚಲ ದೇವಸ್ಥಾನ ವ್ಯಾಪ್ತಿಯಲ್ಲಿ ಮುಂದಿನ ಯುಗಾದಿವರೆಗೆ ತೆಂಗಿನಕಾಯಿ ಮಾರಾಟದ ಹರಾಜು ಪಡೆದವರು ಹಾಗೂ ದೇವಸ್ಥಾನದ ಅಧಿಕಾರಿಗಳ ನಡುವೆ ಕಾಯಿ ಮಾರಾಟ ದರ ಹಾಗೂ ಸ್ಥಳದ ಕುರಿತು ತಿಕ್ಕಾಟ ಜೋರಾಗಿದ್ದು, ವಿಷಯ ಸಚಿವ ಶಿವರಾಜ ತಂಗಡಗಿವರೆಗೂ ತಲುಪಿದೆ. ಆದರೆ, ಸಚಿವರಿನ್ನೂ ಯಾವ ಪ್ರತಿಕ್ರಿಯೆ ನೀಡಿಲ್ಲ.
2024ರ ಏ.19ರಂದು ದೇವಸ್ಥಾನದಲ್ಲಿ ನಡೆದ ಬಹಿರಂಗ ಹರಾಜಿನಲ್ಲಿ 29 ಲಕ್ಷ ರೂ.ಗಳಿಗೆ ಬಿಡ್‌ದಾರರು ಹರಾಜು ಪಡೆದಿದ್ದರು. 30 ರೂ.ಗೆ ಒಂದರಂತೆ ಕಾಯಿ ಮಾರಬೇಕೆಂದು ಹರಾಜಿನಲ್ಲಿ ತೀರ್ಮಾನಿಸಲಾಗಿತ್ತು. ಸಾರ್ವಜನಿಕರ ಒತ್ತಾಯಕ್ಕೆ ಬಸ್ ನಿಲ್ದಾಣದ ತಿರುವಿನವರೆಗೆ ಇದ್ದ ಮಾರಾಟದ ಸ್ಥಳವನ್ನು ವಾಲ್ಮೀಕಿ ವೃತ್ತದವರೆಗೂ ವಿಸ್ತರಿಸಲಾಗಿತ್ತು. ಇದು ಬಿಡ್ ಮೊತ್ತ ಹೆಚ್ಚಳಕ್ಕೆ ಕಾರಣವಾಗಿತ್ತು. ಆದರೆ, ಸ್ಥಳದ ಬಗ್ಗೆ ಆರಂಭದಿಂದಲೂ ಸಮಸ್ಯೆಗಳು ಎದುರಾಗಿದ್ದವು. ಆದರೆ, 50 ರೂ.ವರೆಗೆ ಕಾಯಿ ಮಾರಾಟ ಮಾಡಿದ್ದು ಅಸಮಾಧಾನಕ್ಕೆ ಕಾರಣವಾಗಿತ್ತು.
ಕನ್ನಡಪರ ಸಂಘಟನೆಗಳು ವಿಡಿಯೋ ಸಹಿತ ಮೌಖಿಕ ದೂರನ್ನು ತಹಸೀಲ್ದಾರ್‌ಗೆ ಸಲ್ಲಿಸಿದ್ದವು. ಈ ಕುರಿತು ವಿಜಯವಾಣಿಯಲ್ಲಿ ಸುದ್ದಿ ಪ್ರಕಟವಾಗಿ, ವಿಷಯ ಸಚಿವರ ಅಂಗಳಕ್ಕೂ ತಲುಪಿತ್ತು. ಸುದ್ದಿ ಪ್ರಕಟವಾದದ್ದನ್ನು ಉಲ್ಲೇಖಿಸಿ ಹಾಗೂ ಸಂಘಟನೆಗಳ ವಿಡಿಯೋ ದೃಶ್ಯದ ಆಧಾರದಲ್ಲಿ ನ.28ರಂದು ಬಿಡ್‌ದಾರರಿಗೆ ನೋಟಿಸ್ ನೀಡಿ, ಸ್ಪಷ್ಟೀಕರಣ ಕೇಳಲಾಗಿತ್ತು. 30 ರೂ.ಗಳಿಗೆ ಒಂದು ಕಾಯಿ ಮಾರಬೇಕು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದಲ್ಲದೆ ಖುದ್ದು ದೇವಸ್ಥಾನದ ಸಿಬ್ಬಂದಿ ಅಂಗಡಿಗಳ ಮುಂದೆ ದರದ ಫಲಕ ಅಳವಡಿಸಿದ್ದರು. ಆದರೆ, ಬೋರ್ಡ್‌ಗಳನ್ನು ಕಿತ್ತೆಸೆದು, ಭಕ್ತರ ಜೇಬಿಗೆ ಕತ್ತರಿ ಹಾಕುವ ಕೆಲಸ ಮುಂದುವರಿದಿದೆ.
ಬಿಡ್ ನಡೆಯುವಾಗ ವಾಲ್ಮೀಕಿ ವೃತ್ತದವರೆಗೆ ಮಾರಾಟ ಮಾಡಬಹುದು ಎಂದು ತಿಳಿಸಿದ್ದರಿಂದ ಹರಾಜು ಮೊತ್ತ ಹೆಚ್ಚಿಸಿ ಪಡೆದಿದ್ದೇನೆ. ಸಮಸ್ಯೆಗಳಾದರೆ ಪತ್ರ ವ್ಯವಹಾರದ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ತಿಳಿಸಲಾಗಿತ್ತು. ಆದರೆ, ವಾಲ್ಮೀಕಿ ವೃತ್ತದವರೆಗೆ ದೇವಸ್ಥಾನ ವ್ಯಾಪ್ತಿಗೆ ಒಳಪಡುವುದಿಲ್ಲ. ಇದರಿಂದ ಅಲ್ಲಿನ ವ್ಯಾಪಾರಿಗಳು ನಮ್ಮ ಬಳಿ ಕಾಯಿ ಖರೀದಿಸುತ್ತಿಲ್ಲ. ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಪತ್ರಗಳನ್ನು ಬರೆದಿದ್ದೇನೆ ಎಂದು ಗುತ್ತಿಗೆದಾರರು ಹೇಳುತ್ತಾರೆ.
ಮೌಖಿಕವಾಗಿ ಚರ್ಚಿಸಿ ಸ್ಥಳವನ್ನು ಈ ಹಿಂದಿನಂತೆ ನಿಗದಿಪಡಿಸಿ, ಬಿಡ್ ಮೊತ್ತವನ್ನು 22.5 ಲಕ್ಷ ರೂ.ಗಳಿಗೆ ಇಳಿಸಿದ್ದಲ್ಲದೆ, ಬಿಡ್‌ನ ದರದಿಂದ ನಷ್ಟವಾಗುತ್ತಿದ್ದರಿಂದ 30 ರೂ. ಬದಲಾಗಿ 40 ರೂ. ಮಾರಲು ಕೋರಿದಾಗ ಒಪ್ಪಿಗೆ ಕೊಟ್ಟಿದ್ದಾರೆ. ಅದರಂತೆ ಮಾರಾಟ ಮಾಡುತ್ತಿದ್ದೇವೆ. ಆದರೆ, ದೇವಸ್ಥಾನದಿಂದ ಯಾವುದೇ ಲಿಖಿತ ರೂಪದಲ್ಲಿ ದಾಖಲೆ ನೀಡಿಲ್ಲ. ಈ ಬಗ್ಗೆಯೂ ಪತ್ರ ಬರೆದಿದ್ದೇವೆ. ಆದರೆ, ದೇವಸ್ಥಾನದ ನೊಟೀಸ್‌ನಲ್ಲಿ 29 ಲಕ್ಷ ರೂ.ಗಳಿಗೆ ಬಿಡ್ ಪಡೆದಿದ್ದು, ನಿಯಮದಂತೆ ಇಲ್ಲಿಯವರೆಗಿನ ಹಣ ಭರಿಸಬೇಕೆಂದು ತಿಳಿಸಿರುವುದು ಸಮಸ್ಯೆಯಾಗಿದ್ದು, ನಾವು ಬಿಡ್‌ನಿಂದ ಹಿಂದೆ ಸರಿಯುತ್ತಿದ್ದೇವೆ ಎಂದು ಲಿಖಿತವಾಗಿ ತಿಳಿಸಿದ್ದಾರೆ.
ಬಿಡ್ ನಂತರ ನಿಗದಿಯಂತೆ ಹರಾಜುದಾರರಿಂದ ಹಣ ಭರಿಸಿಕೊಂಡಿದ್ದರೆ, ಚೆಕ್‌ಗಳನ್ನು ಪಡೆದುಕೊಂಡಿದ್ದರೆ ಬಿಡ್ ಪಡೆದವರು ಈ ರೀತಿಯಾಗಿ ಅರ್ಧಕ್ಕೆ ಕೈ ಬಿಡುತ್ತೇನೆ, ಹೆಚ್ಚಿನ ದರಕ್ಕೆ ಕಾಯಿ ಮಾರಾಟ ಮಾಡುತ್ತೇನೆ ಎಂದು ಪತ್ರ ಬರೆಯುತ್ತಿರಲಿಲ್ಲ. ಅಲ್ಲದೆ, ಬಿಡ್ ಪಡೆದವರು ಮಾರಾಟ ಸ್ಥಳದ ಸಮಸ್ಯೆ ಬಗ್ಗೆ ಪತ್ರ ಬರೆದಿದ್ದಾಗ ದಿಟ್ಟ ನಿರ್ಧಾರ ತೆಗೆದುಕೊಳ್ಳದಿರುವುದು ಸಮಸ್ಯೆ ಮತ್ತಷ್ಟು ಜಟಿಲವಾಗಲು ಕಾರಣ ಎನ್ನಲಾಗಿದೆ. ವಿಜಯವಾಣಿಯಲ್ಲಿ ಏ.21ರಂದು ದೇವಸ್ಥಾನ ಸಮಿತಿಯ ಅವೈಜ್ಞಾನಿಕ ನಿರ್ಧಾರ ಎಂದು ಜಾಗದ ಕುರಿತು ಸುದ್ದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
"

ಈಗಾಗಲೇ ದೇವಸ್ಥಾನ ಸಮಿತಿಯಿಂದ ಬಿಡ್‌ದಾರರಿಗೆ ನೋಟಿಸ್ ನೀಡಲಾಗಿದೆ. ಸಮಸ್ಯೆ ಇತ್ಯರ್ಥಕ್ಕೆ ಡಿ.9ಕ್ಕೆ ಸಮಿತಿ ಸಭೆ ಕರೆಯಲಾಗಿದ್ದು, ತೀರ್ಮಾನ ಕೈಗೊಳ್ಳಲಾಗುವುದು. ಬಿಡ್‌ದಾರರು ಸ್ಪಂದಿಸದಿದ್ದರೆ ಮೊಕದ್ದಮೆ ದಾಖಲಿಸಲಾಗುವುದು.