ಗಂಗಾವತಿ ತಾಲೂಕಿನ ಹೊಸಳ್ಳಿ ಶ್ರೀ ಗಂಗಾಪರಮೇಶ್ವರಿ ದೇವಾಲಯದಲ್ಲಿ ಗಂಗಾಮತ ಸಮಾಜದಿಂದ ಹಮ್ಮಿಕೊಂಡಿದ್ದ ಪಾದಗಟ್ಟೆ ಪ್ರತಿಷ್ಠಾಪನೆ ಕಾರ್ಯಕ್ರಮದ ಧ್ವಜಾರೋಹಣವನ್ನು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ ನೆರವೇರಿಸಿದರು. ಮಾಜಿ ಶಾಸಕ ಪರಣ್ಣಮುನವಳ್ಳಿ, ಸಮಾಜದ ಪ್ರಮುಖರಾದ ಸಿದ್ದಪ್ಪ ಕರೇಕುರಿ, ಡಾಣಿ ಮರಿಯಪ್ಪ ಇತರರಿದ್ದರು. 
ಕೊಪ್ಪಳ

ಗಂಗಾಮತ ಸಮಾಜ ಮುಖ್ಯವಾಹಿನಿಗೆ ಬರಲಿ

ಕುರುವತ್ತಿ ಶ್ರೀಕಾಂತಪ್ಪ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ಪರಣ್ಣ ಮುನವಳ್ಳಿ ಹೇಳಿಕೆ
  • ಹೊಸಳ್ಳಿ ಶ್ರೀ ಗಂಗಾಪರಮೇಶ್ವರಿ ದೇಗುಲ ಪಾದಗಟ್ಟೆ ಪ್ರತಿಷ್ಠಾಪನೆ
ಗಂಗಾವತಿ: ತಾಲೂಕಿನ ಹೊಸಳ್ಳಿ ಶ್ರೀ ಗಂಗಾಪರಮೇಶ್ವರಿ ದೇವಾಲಯದಲ್ಲಿ ಪಾದಗಟ್ಟೆ ಪ್ರತಿಷ್ಠಾಪನೆ ಹಾಗೂ ಗಂಗಾದೇವಿ ಜಯಂತ್ಯುತ್ಸವ ಕಾರ್ಯಕ್ರಮ ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
ಗಂಗಾಮತ ಸಮಾಜದಿಂದ ಎರಡು ದಿನಗಳ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೆಳಗ್ಗೆಯಿಂದಲೇ ವಿವಿಧ ಧಾರ್ಮಿಕ ಕಾರ್ಯಕ್ರಮ ಜರುಗಿದವು. ಮೂರ್ತಿಗೆ ಅಭಿಷೇಕ, ಪೂಜೆ ಮತ್ತು ಹೂವಿನ ಅಲಂಕಾರ ನೆರವೇರಿಸಲಾಯಿತು. ರಥೋತ್ಸವಕ್ಕಾಗಿ ನಿರ್ಮಿಸಿರುವ ಪಾದಗಟ್ಟೆಯನ್ನು ಕಲ್ಮಠದ ಡಾ.ಕೊಟ್ಟೂರು ಸ್ವಾಮೀಜಿ, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪನೆ ಮಾಡಲಾಯಿತು.
ದೇವಾಲಯದಲ್ಲಿ ಪಾದಗಟ್ಟೆಯ ಧ್ವಜಾರೋಹಣಕ್ಕೆ ಪೂಜೆ ನೆರವೇರಿಸಿದ ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಹಿಂದುಳಿದ ಗಂಗಾಮತ ಸಮಾಜವನ್ನು ಅಭಿವೃದ್ಧಿಯ ಮುಖ್ಯವಾಹಿನಿಗೆ ತರಬೇಕಿದ್ದು, ಸಮಾಜ ಸಂಘನಾತ್ಮಕವಾಗಿ ಹಕ್ಕುಗಳನ್ನು ಪಡೆಯಬೇಕಿದೆ. ಧಾರ್ಮಿಕ ಮತ್ತು ಅಧ್ಯಾತ್ಮ ಚಟುವಟಿಕೆಗಳನ್ನು ನಿರಂತರ ನೆರವೇರಿಸುತ್ತಿರುವ ಸಮಾಜದ ಕಾರ್ಯ ಶ್ಲಾಘನೀಯ ಎಂದರು.
ಸಮಾಜದ ಪ್ರಮುಖರಾದ ಸಿದ್ದಪ್ಪ ಕರೇಕುರಿ, ಡಾಣಿ ಮರಿಯಪ್ಪ, ಚಂದ್ರಪ್ಪ ಕಾಲೇದ್, ಯಂಕಪ್ಪ ಭೋವೇರ್, ಶ್ರೀನಾಥ, ಚನ್ನಬಸವಸ್ವಾಮಿ ಕಲ್ಮಠ, ಬಸವರಾಜ್ ಉಪ್ಪಾರ, ಮಹೇಶ ಮೋಟಿ ಇತರರಿದ್ದರು.