ಕುಷ್ಟಗಿಯಲ್ಲಿ ತಹಸೀಲ್ದಾರ್ ಅಶೋಕ ಶಿಗ್ಗಾವಿಗೆ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಮನವಿ ಸಲ್ಲಿಸಿದರು.  
ಕೊಪ್ಪಳ

ತಾಂತ್ರಿಕ ದೋಷ ಶಿಕ್ಷಕ ಹುದ್ದೆ ಆಕಾಂಕ್ಷಿಗಳಿಗೆ ಸಂಕಷ್ಟ

ನರೇಶ್ ಕುಮಾರ್

ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸುತ್ತಿರುವ ತಾಲೂಕಿನ ಉದ್ಯೋಗಾಕಾಂಕ್ಷಿಗಳಿಗೆ ಕಂದಾಯ ಇಲಾಖೆಯ ಪ್ರಮಾಣಪತ್ರ ವಿತರಣಾ ತಂತ್ರಾಂಶದಲ್ಲಿನ ತಾಂತ್ರಿಕ ದೋಷ ಹೊಸ ಸಂಕಷ್ಟ ತಂದೊಡ್ಡಿದೆ.

ಜಾತಿ ಮತ್ತು ಆದಾಯ ಪ್ರಮಾಣಪತ್ರಕ್ಕೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವ ವೇಳೆ ಅಭ್ಯರ್ಥಿಗಳು ಉದ್ದೇಶದ ಕಾಲಂನಲ್ಲಿ ನೌಕರಿ ಎಂದು ಆಯ್ಕೆ ಮಾಡುತ್ತಿದ್ದಾರೆ. ಆದರೆ, ವಿತರಿಸುತ್ತಿರುವ ಪ್ರಮಾಣಪತ್ರದಲ್ಲಿ ಮಾತ್ರ ವಿದ್ಯಾಭ್ಯಾಸ ಎಂದು ನಮೂದಾಗುತ್ತಿದೆ. ಇದರಿಂದ ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಲ್ಲಿ ಈ ಪ್ರಮಾಣಪತ್ರ ಮಾನ್ಯವಾಗಲಿದೆಯೇ ಎಂಬ ಆತಂಕ ಮೂಡಿದೆ.
ಶಿಕ್ಷಕರ ನೇಮಕಾತಿ ಸಂದರ್ಭದಲ್ಲಿ ಜಾತಿ ಮತ್ತು ಆದಾಯ ಪ್ರಮಾಣಪತ್ರದಲ್ಲಿ ಉದ್ದೇಶ ವಿದ್ಯಾಭ್ಯಾಸಕ್ಕಾಗಿ ಎಂದು ನಮೂದಾಗಿದ್ದರೆ ಅದನ್ನು ಪರಿಗಣಿಸಲಾಗುವುದಿಲ್ಲ ಎಂಬ ನಿಯಮವಿರುವುದರಿಂದ ಅಭ್ಯರ್ಥಿಗಳು ಸಮಸ್ಯೆಗೆ ಸಿಲುಕಿದ್ದಾರೆ. ಈ ಕಾರಣದಿಂದ ಕೆಲವರು ಹಳೆಯ ಪ್ರಮಾಣಪತ್ರ ರದ್ದುಪಡಿಸಿ, ನೇಮಕಾತಿ ಉದ್ದೇಶಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ. ಆದರೆ ಹೊಸ ಪ್ರಮಾಣ ಪತ್ರದಲ್ಲಿಯೂ ವಿದ್ಯಾಭ್ಯಾಸ ಎಂದು ನಮೂದಾಗುತ್ತಿರುವುದು ಗೊಂದಲಕ್ಕೆ ಕಾರಣವಾಗಿದೆ. ತಾಂತ್ರಿಕ ದೋಷದಿಂದಾಗಿ ಅರ್ಜಿಗಳು ತಿರಸ್ಕೃತವಾಗುವ ಸಾಧ್ಯತೆಯಿದೆ ಎಂಬ ಭೀತಿ ಅಭ್ಯರ್ಥಿಗಳನ್ನು ಕಾಡುತ್ತಿದೆ. 
ಹೀಗಾಗಿ ಶಿಕ್ಷಕ ಆಕಾಂಕ್ಷಿಗಳು ಸೋಮವಾರ ತಹಸೀಲ್ದಾರ್ ಅಶೋಕ ಶಿಗ್ಗಾಂವಿ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು. ಪ್ರಮಾಣಪತ್ರ ವಿತರಣಾ ತಂತ್ರಾಂಶದಲ್ಲಿನ ಸಮಸ್ಯೆ ಕೂಡಲೇ ಪರಿಹರಿಸಬೇಕು. ಅಭ್ಯರ್ಥಿಗಳಿಗೆ ಯಾವುದೇ ಅನ್ಯಾಯವಾಗದಂತೆ ನೇಮಕಾತಿ ಪ್ರಕ್ರಿಯೆಗೆ ಅಗತ್ಯವಿರುವ ಪ್ರಮಾಣಪತ್ರಗಳನ್ನು ಸಮಯಕ್ಕೆ ಸರಿಯಾಗಿ ಒದಗಿಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಶಿಕ್ಷಕ ಹುದ್ದೆ ಆಕಾಂಕ್ಷಿಗಳು ಛತ್ರಪ್ಪ ಮೇಗೂರು, ಸಂಗಪ್ಪ ಅಂಗಡಿ, ಶ್ರೀಕಾಂತ್ ಕಿರಗಿ, ಮಾನಪ್ಪ ಮದಲಗಟ್ಟಿ, ಮಲ್ಲೇಶ ನಿಡಗುಂದಿ, ಶ್ರೀಧರ ಚಳ್ಳಾರಿ, ರುದ್ರಗೌಡ ಬಿಜ್ಜಳ, ನಾಗರಾಜ ಬಂಡಿ ಇತರರಿದ್ದರು.