ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಅಳವಡಿಕೆ ವಿಸಿ ಪರಿಶೀಲಿಸಿದರು. 
ಕೊಪ್ಪಳ

ಟಿಬಿ ಡ್ಯಾಂ ಕ್ರಸ್ಟ್​ ಗೇಟ್​ ಲೋಕಾರ್ಪಣೆ 25ಕ್ಕೆ

ಪ್ರಮುಖ ಮುಖ್ಯಾಂಶಗಳು

  • ಸಚಿವ ರಾಮಲಿಂಗಾರೆಡ್ಡಿ ಮಾಹಿತಿ
  • ಮೂರು ರಾಜ್ಯದ ಸಿಎಂಗಳು ಭಾಗಿ
ಕೊಪ್ಪಳ : ತುಂಗಭದ್ರಾ ಜಲಾಶಯದ ಕ್ರಸ್ಟ್​ ಗೇಟ್​ ಅಳವಡಿಕೆ ಪೂರ್ಣಗೊಂಡಿದ್ದು, ಜೂ.25ರಂದು ಲೋಕಾರ್ಪಣೆಗೊಳ್ಳಲಿದೆ. ಆಂಧ್ರ, ತೆಲಂಗಾಣ ಸಿಎಂಗಳು ಸೇರಿ ಕೇಂದ್ರ ಜಲಶಕ್ತಿ ಸಚಿವರು ಭಾಗಿಯಾಗುವರೆಂದು ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದರು.
ತಾಲೂಕಿನ ಮುನಿರಾಬಾದ್​ನಲ್ಲಿ ಗುರುವಾರ ಕಾರ್ಯಕ್ರಮ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು. 
51 ಕೋಟಿ ರೂ. ವೆಚ್ಚದಲ್ಲಿ 33 ಕ್ರಸ್ಟ್​ ಗೇಟ್​ ಹಾಗೂ ಚೈನ್​ ಬದಲಾಯಿಸಲಾಗಿದೆ. ಜೂ.25ರಂದು ಲೋಕಾರ್ಪಣೆ ಆಗಲಿದೆ. ಸಿಎಂ ಡಿ.ಕೆ.ಶಿವಕುಮಾರ್​, ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್​ರೆಡ್ಡಿ ಭಾಗಿಯಾಗುವರು. ಕೇಂದ್ರ ಜಲಶಕ್ತಿ ಸಚಿವರು, ಮೂರು ರಾಜ್ಯದ ಸಚಿವರು ಇನ್ನಿತರರು ಬರಲಿದ್ದಾರೆ. ಮುನಿರಾಬಾದ್​ ಸರ್ಕಾರಿ ಪ್ರೌಢ ಶಾಲಾ ಮೈದಾನದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ ಎಂದು ಮಾಹಿತಿ ನೀಡಿದರು. 
ಗೇಟ್​ 50 ವರ್ಷ ಬಾಳಿಕೆ ಬರಲಿವೆ. ಟಿಬಿ ಡ್ಯಾಂ ಹೂಳಿನ ಸಮಸ್ಯೆ, ನವಲಿ ಸಮಾನಾಂತರ ಜಲಾಶಯ, ಕೃಷ್ಣಾ, ಮಹದಾಯಿ ಸೇರಿ ರಾಜ್ಯದ ಪ್ರಮುಖ ನೀರಾವರಿ ಯೋಜನೆಗಳ ಬಗ್ಗೆ ಸಮಯ ಸಿಕ್ಕಲ್ಲಿ ಚರ್ಚೆ ನಡೆಸುತ್ತೇವೆ. ಅಂತಾರಾಜ್ಯ ನೀರಾವರಿ ಯೋಜನೆಗಳಿಗೆ ಆಯಾ ರಾಜ್ಯಗಳ ಒಪ್ಪಿಗೆ ಅವಶ್ಯ ಇರುವುದರಿಂದ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ. ನಮ್ಮ ಪಾಲಿನ ನೀರು ಪಡೆಯಲು ಪ್ರಯತ್ನಿಸುತ್ತೇವೆಂದು ಭರವಸೆ ನೀಡಿದರು.

ಯಾವುದೇ ಆಪರೇಷನ್​ ಇಲ್ಲ 

ಎಂಎಲ್ಸಿ ಚುನಾವಣೆ ಸುಸೂತ್ರವಾಗಿ ನಡೆದಿದೆ. ನಾನೂ ಮತ ಹಾಕಿರುವೆ. ಐದನೇ ಅಭ್ಯರ್ಥಿ ಸಹ ಗೆಲ್ಲಲಿದ್ದಾರೆ. ಕ್ರಾಸ್​ ಮಾಡಿದವರ ಬಗ್ಗೆ ನನಗೆ ಗೊತ್ತಿಲ್ಲ. 135 ಶಾಸಕರು ಇರುವುದರಿಂದ ಸೆಕೆಂಡ್​ ಪ್ರಿಫರೆನ್ಸ್​ ಲ್ಲಿ ವೋಟ್​ ಬರಲಿದೆ. ಒಟ್ಟಿನಲ್ಲಿ ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆಂದು ರಾಮಲಿಂಗಾರೆಡ್ಡಿ ಹೇಳಿದರು. 
ನಾನು ಖಾತೆ ಹಿಂದೆ ಹೋಗಿಲ್ಲ. ರಾಜೀನಾಮೆ ನೀಡಿದ್ದು ಬೇರೆ ವಿಷಯಕ್ಕೆ. ಜಲಸಂಪನ್ಮೂಲ ಖಾತೆ ರೈತರಿಗೆ ಸಂಬಂಧಿಸಿದ್ದು. ರೈತರ ಸೇವೆ ಮಾಡುವ ಅವಕಾಶ ಸಿಕ್ಕಿದ್ದು ತೃಪ್ತಿ ತಂದಿದೆ. 37 ವರ್ಷ ರಾಜಕೀಯದಲ್ಲಿ ಸತತ ಶಾಸಕನಾಗಿರುವೆ. ಹಣಕಾಸು, ಎಪಿಎಂಸಿ, ಶಿಕ್ಷಣ, ಸಾರಿಗೆ, ಮುಜರಾಯಿ ಖಾತೆ ನಿಭಾಯಿಸಿರುವೆ. ಎಲ್ಲ ಖಾತೆಗಳನ್ನು ಚೆನ್ನಾಗಿ ನಿರ್ವಹಿಸಿರುವೆ. 1985ರಲ್ಲಿ ವಿಧಾನಸಭೆ ಪ್ರವೇಶಿಸಿದೆ. ನಮ್ಮ ತಂದೆ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷರಾಗಿದ್ದರು. ಆಗಲೂ ನಾನು ಟಿಕೆಟ್​ ಕೇಳಿರಲಿಲ್ಲ. ವೀರಪ್ಪ ಮೊಯ್ಲಿ ನನ್ನ ಕರೆದು ಟಿಕೆಟ್​ ನೀಡಿದ್ದರು. ಯಾರಿಗೂ ಕೇಳದೆ ಅಧಿಕಾರ ಸಿಕ್ಕಿದ್ದು ನನ್ನ ಅದೃಷ್ಟವೆಂದು ಇತಿಹಾಸ ಮೆಲಕು ಹಾಕಿದರು. 
"

ಬಿಡದಿ ಟೌನ್​ಶಿಪ್​ ಬಿಜೆಪಿಯವರಿಗೂ ಬೇಕಾಗಿದೆ. ನಮ್ಮ ಅವಧಿಯಲ್ಲಿ ಅನುಷ್ಠಾನ ಆದರೆ ಕ್ರೆಡಿಟ್​ ನಮ್ಮ ಸರ್ಕಾರಕ್ಕೆ ಸಿಗಲಿದೆ ಎಂದು ವಿರೋಧಿಸುತ್ತಿದ್ದಾರೆ. ಬಿಜೆಪಿ ಸರ್ಕಾರ ಇದ್ದಾಗಲೂ ಬಜೆಟ್​ನಲ್ಲಿ ಘೋಷಿಸಿದ್ದರು. ಈಗ ರಾಜಕೀಯ ಕಾರಣಕ್ಕೆ ವಿರೋಧಿಸುತ್ತಿದ್ದಾರೆ ಅಷ್ಟೇ.

— ರಾಮಲಿಂಗಾರೆಡ್ಡಿ. ಜಲಸಂಪನ್ಮೂಲ ಸಚಿವ.