ಕೊಪ್ಪಳ ತಾಲೂಕಿನ ಮುನಿರಾಬಾದ್ನಲ್ಲಿ ವೇದಿಕೆ ಕಾರ್ಯಕ್ರಮದ ಅಂತಿಮ ಸಿದ್ಧತೆ ವೀಸಿದ ಶಾಸಕರು. ಸಂಸದ ರಾಜಶೇಖರ ಹಿಟ್ನಾಳ, ಶಾಸಕರಾದ ಶಿವರಾಜ ತಂಗಡಗಿ, ರಾವೇಂದ್ರ ಹಿಟ್ನಾಳ, ಮಾಜಿ ಸಚಿವ ಅಮರೇಗೌಡ ಬಯ್ಯಾಪುರ ಇದ್ದರು.
- ತ್ರೀವಳಿ ರಾಜ್ಯಗಳ ಸಿಎಂಗಳು ಭಾಗಿ
- ಮುನಿರಾಬಾದ್ನಲ್ಲಿ ಕಾರ್ಯಕ್ರಮ
ಕೊಪ್ಪಳ : ಕರ್ನಾಟಕ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳ ಜೀವನಾಡಿ ತುಂಗಭದ್ರಾ ಜಲಾಶಯಕ್ಕೆ ಹೊಸದಾಗಿ 33 ಕ್ರಸ್ಟ್ ಗೇಟ್ ಯಶಸ್ವಿಯಾಗಿ ಅಳವಡಿಸಲಾಗಿದೆ. ತ್ರಿವಳಿ ರಾಜ್ಯಗಳ ಸಿಎಂಗಳು ಹಾಗೂ ಕೇಂದ್ರ ಜಲಶಕ್ತಿ ಸಚಿವರ ಸಮ್ಮುಖದಲ್ಲಿ ಇಂದು ಲೋಕಾರ್ಪಣೆಗೊಳ್ಳಲಿದ್ದು, ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ.
ವರ್ಷದ ಹಿಂದೆ 19ನೇ ಸ್ಪಿಲ್ವೇ ಗೇಟ್ ತುಂಡಾಗಿ ತೀವ್ರ ಆತಂಕ ತಂದೊಡ್ಡಿತ್ತು. ತಾತ್ಕಾಲಿಕ ಗೇಟ್ ಅಳವಡಿಸಿದರೂ ಬಾಕಿ ಗೇಟ್ಗಳು ಶಕ್ತಿ ಕಳೆದುಕೊಂಡ ಹಿನ್ನೆಲೆಯಲ್ಲಿ 51 ಕೋಟಿ ರೂ. ವೆಚ್ಚದಲ್ಲಿ ಹೊಸದಾಗಿ 33 ಗೇಟ್ ಬದಲಿಸಲಾಗಿದೆ. ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದು, ಲೋಕಾರ್ಪಣೆಗೆ ಮುಹೂರ್ತ ನಿಗದಿಪಡಿಸಿದೆ. ಆಂಧ್ರ ಸಿಎಂ ಚಂದ್ರಬಾಬು ನಾಯ್ಡು, ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಹಾಗೂ ರಾಜ್ಯದ ಸಿಎಂ ಡಿ.ಕೆ.ಶಿವಕುಮಾರ್ ಜಂಟಿಯಾಗಿ ಲೋಕಾರ್ಪಣೆ ಮಾಡಲಿದ್ದಾರೆ.
ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ್, ಜಲಶಕ್ತಿ ರಾಜ್ಯಖಾತೆ ಸಚಿವರಾದ ವಿ.ಸೋಮಣ್ಣ, ರಾಜ್ ಭೂಷಣ್ ಚೌಧರಿ ಆಗಮಿಸುವ ನಿರೀೆ ಇದೆ. ಜತೆಗೆ ಮೂರು ರಾಜ್ಯಗಳ ನೀರಾವರಿ ಮಂತ್ರಿಗಳು, ಕೊಪ್ಪಳ, ಬಳ್ಳಾರಿ, ರಾಯಚೂರು, ವಿಜಯನಗರ, ಗದಗ ಜಿಲ್ಲೆಗಳ ಶಾಸಕ, ಸಂಸದರು ಬರಲಿದ್ದಾರೆ. ಕೊಪ್ಪಳ ತಾಲೂಕಿನ ಮುನಿರಾಬಾದ್ ಸರ್ಕಾರಿ ಶಾಲಾ ಆವರಣದಲ್ಲಿ ವೇದಿಕೆ ನಿರ್ಮಿಸಿದ್ದು, ಸಾವಿರಾರು ಜನ ಸೇರುವ ನಿರೀೆ ಇದೆ. ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.
ನದಿ ಜೋಡಣೆ ಪ್ರಸ್ತಾಪ ಸಾಧ್ಯತೆ
ಟಿಬಿ ಡ್ಯಾಂನಲ್ಲಿ 28 ಟಿಎಂಸಿ ಅಡಿ ಹೂಳು ತುಂಬಿದ್ದು, ಪರ್ಯಾಯವಾಗಿ ನವಲಿ ಸಮಾನಾಂತರ ಜಲಾಶಯ ನಿರ್ಮಿಸುವ ಪ್ರಸ್ತಾಪವಿದೆ. ಜತೆಗೆ ಕೃಷ್ಣಾ ಹಾಗೂ ತುಂಗಭದ್ರಾ ನದಿ ಜೋಡಣೆ, ಕೃಷ್ಣಾಕೊಳ್ಳದ ಯೋಜನೆಗಳಿಗೆ ಸಂಬಂಧಿಸಿದಂತೆ ನೆರೆ ರಾಜ್ಯ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿ ಒಪ್ಪಿಗೆ ಪಡೆವ ನಿಟ್ಟಿನಲ್ಲಿ ಸಿಎಂ ಡಿಕೆಶಿ ಯೋಜಿಸಿದ್ದಾರೆನ್ನಲಾಗಿದೆ. ರಾಜ್ಯದ ನೀರಾವರಿಗೆ ಸಂಬಂಧಿಸಿದಂತೆ ಪ್ರಮುಖ ವಿಷಯಗಳ ಚರ್ಚೆ ನಡೆಯಲಿದ್ದು, ರಾಜ್ಯದ ಮಟ್ಟಿಗೆ ಮಹತ್ವದ ಕಾರ್ಯಕ್ರಮವಾಗಲಿದೆ.