ಕೊಪ್ಪಳ ತಾಲೂಕಿನ ಮುನಿರಾಬಾದ್ ಟಿಬಿ ಡ್ಯಾಂನ 18ನೇ ಕ್ರಸ್ಟ್ ಗೇಟ್ ಯಶಸ್ವಿಯಾಗಿ ಅಳವಡಿಕೆಯಾಗಿರುವುದು.
ಕೊಪ್ಪಳ: ತಾಲೂಕಿನ ಮುನಿರಾಬಾದ್ ತುಂಗಭದ್ರಾ ಜಲಾಶಯದ 18ನೇ ಕ್ರಸ್ಟ್ ಗೇಟ್ ಅಳವಡಿಕೆ ಯಶಸ್ವಿಯಾಗಿದೆ. ಸೋಮವಾರ ಅಧಿಕಾರಿಗಳು ನೂತನ ಗೇಟ್ ಪರೀಕ್ಷೆ ನಡೆಸಿದ್ದು, ಸುಗಮವಾಗಿ ಮೇಲೆರಿ ಕೆಳಗಿಳಿದಿದೆ. ಈ ಮೂಲಕ ನಿಗದಿತ ಅವಧಿಯೊಳಗೆ ಎಲ್ಲ ಗೇಟ್ ಅಳವಡಿಕೆ ಆಗುವ ವಿಶ್ವಾಸ ಹೆಚ್ಚಿಸಿದೆ.
33 ಕ್ರಸ್ಟ್ ಗೇಟ್ಗಳ ಪೈಕಿ 10 ದಿನಗಳ ಬಳಿಕ 18ನೇ ಗೇಟ್ ಅಳವಡಿಸಲಾಗಿದೆ. ಗೇಟ್ ತೆರವು ಹಾಗೂ ಅಳವಡಿಕೆಗೆ ತಲಾ ಎರಡು ತಂಡಗಳು ಕೆಲಸ ಮಾಡುತ್ತಿವೆ. 20ನೇ ಗೇಟ್ ಅಳವಡಿಕೆಯೂ ಭಾಗಶ: ಮುಗಿದಿದೆ. ಹೊಸದಾಗಿ 15 ಗೇಟ್ ಅಳವಡಿಕೆಗೆ ಸಿದ್ಧವಾಗಿವೆ. ಗದಗ ಮತ್ತು ಹೊಸಪೇಟೆಯಲ್ಲಿ ಬಾಕಿ 8 ಗೇಟ್ ತಯಾರಿಸಲಾಗುತ್ತಿದೆ. ನಾಲ್ಕು ಗೇಟ್ ಸಂಪೂರ್ಣ ತೆರವು ಮಾಡಿದ್ದು, ಮೂರು ಗೇಟ್ಗಳನ್ನು 10 ಅಡಿವರೆಗೆ ಕತ್ತರಿಸಲಾಗಿದೆ.
18ನೇ ಗೇಟ್ ಅಳವಡಿಕೆ ಮುಗಿದ ಹಿನ್ನೆಲೆಯಲ್ಲಿ ತಜ್ಞರು, ಅಧಿಕಾರಿಗಳ ತಂಡ ಸೋಮವಾರ ಪರೀಕ್ಷೆ ನಡೆಸಿತು. ಈ ವೇಳೆ ಸುಲಭವಾಗಿ ಗೇಟ್ ಮೇಲೇರಿತು. ಮತ್ತೆ ಕೆಳಗಿಳಿವ ಮೂಲಕ ಅಳವಡಿಕೆ ಯಶಸ್ವಿಯಾಗಿದ್ದನ್ನು ಖಚಿತಪಡಿಸಿದೆ. ಅಳವಡಿಕೆ ಕಾರ್ಯಾಚರಣೆ ನಿರೀತ ಯಶಸ್ಸು ಕಂಡ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿಶ್ವಾಸ ದ್ವಿಗುಣಗೊಳಿಸಿದೆ. ಮತ್ತೊಂದೆಡೆ ಮೇ ತಿಂಗಳೊಳಗೆ ಎಲ್ಲ ಗೇಟ್ಗಳ ಅಳವಡಿಕೆ ಪೂರ್ಣಗೊಳ್ಳುವ ಆಶಾ ಭಾವನೆ ಜನರಲ್ಲಿ ಮೂಡಿದೆ.