ಭಾನಾಪುರ ಗ್ರಾಮದ ಜಮೀನೊಂದರಲ್ಲಿ ಟ್ಯಾಂಕರ್ ಮೂಲಕ ತೊಗರಿ ಬೆಳೆಗೆ ನೀರುಣಿಸುತ್ತಿರುವುದು. 
ಕೊಪ್ಪಳ

ಬೆಳೆ ಉಳಿಸಿಕೊಳ್ಳಲು ಹರಸಾಹಸ

ಪ್ರಮುಖ ಮುಖ್ಯಾಂಶಗಳು

  • ತೊಗರಿ ಫಸಲಿಗೆ ಟ್ಯಾಂಕರ್ ಮೂಲಕ ನೀರು ಪೂರೈಕೆ
ಕುಕನೂರು: ವರುಣನ ಕಣ್ಣಾಮುಚ್ಚಾಲೆ ಆಟಕ್ಕೆ ಬೇಸತ್ತ ತಾಲೂಕಿನ ಭಾನಾಪುರ ಇತರ ಗ್ರಾಮಗಳ ರೈತರು ಟ್ಯಾಂಕರ್ ಮೂಲಕ ನೀರುಣಿಸಿ ಬೆಳೆ ಉಳಿಸಿಕೊಳ್ಳಲು ಮುಂದಾಗಿದ್ದಾರೆ.
ಪ್ರಸಕ್ತ ವರ್ಷ ಗುರಿ ಮೀರಿ ತೊಗರಿ ಬಿತ್ತನೆ ಮಾಡಲಾಗಿದೆ. 1,190 ಹೆಕ್ಟೇರ್ ಗುರಿ ಇದ್ದು, 6,700 ಹೆಕ್ಟೇರ್‌ನಲ್ಲಿ ಬಿತ್ತನೆ ಮಾಡಲಾಗಿದೆ. ಹೆಸರು 22,290 ಹೆಕ್ಟೇರ್ ನಿಗದಿಯಾಗಿದ್ದು, ಕೇವಲ 11,530 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ. ಮೆಕ್ಕೆಜೋಳ 12,956 ಹೆಕ್ಟೇರ್ ಗುರಿಯಲ್ಲಿ 7,475 ಹೆಕ್ಟೇರ್ ಬಿತ್ತನೆಯಾಗಿದೆ. ಬನ್ನಿಕೊಪ್ಪ, ಇಟಗಿ, ಯರೇಹಂಚಿನಾಳ, ಬಿನ್ನಾಳ ಸೇರಿದಂತೆ ಎರಿ ಭೂಮಿ ಹೊಂದಿರುವ ರೈತರು ಹೆಚ್ಚಾಗಿ ಹೆಸರು ಬಿತ್ತನೆ ಮಾಡುತ್ತಾರೆ. ಮಳೆ ಕೊರತೆ ಕಾರಣ ಅನೇಕರು ಬಿತ್ತನೆ ಮಾಡಿಲ್ಲ. ಈಗಾಗಲೇ ಬಿತ್ತನೆ ಮಾಡಿದವರು ಫಸಲು ಕೈಸೇರುವ ನಿರೀಕ್ಷೆ ಕೈಬಿಟ್ಟು ಕುಳಿತಿದ್ದಾರೆ.
ಪ್ರತಿ ಸಾಲಿನಿಂದ ಸಾಲಿಗೆ 3 ಅಡಿ ಅಂತರದಲ್ಲಿ ತೊಗರಿ ಬಿತ್ತನೆ ಮಾಡಿದ್ದರಿಂದ ಟ್ರಾೃಕ್ಟರ್ ಸಂಚಾರಕ್ಕೆ ವರದಾನವಾಗಿದೆ. ಹೀಗಾಗಿ ಅನೇಕ ರೈತರು ತಿಂಗಳು ಪೂರ್ಣಗೊಂಡ ತೊಗರಿ ಫಸಲು ಉಳಿಸಿಕೊಳ್ಳಲು ಟ್ಯಾಂಕರ್ ಮೊರೆ ಹೋಗಿದ್ದಾರೆ. ಪ್ರತಿ ಎಕರೆಗೆ 5 ಸಾವಿರ ರೂ. ಖರ್ಚು ಬರುತ್ತಿದೆ. ಸದ್ಯ ಬೆಳೆ ಉಳಿಸಿಕೊಂಡರೇ ಮುಂದೆ ಮಳೆಯಾಗಬಹುದೆಂಬ ಆಶಾಭಾವ ರೈತರದ್ದಾಗಿದೆ. ಸರ್ಕಾರ ಕೂಡಲೇ ಬರ ಘೋಷಣೆ ಮಾಡಿ ಸೂಕ್ತ ಪರಿಹಾರ ಒದಗಿಸಬೇಕು ಎಂಬುದು ರೈತರ ಒತ್ತಾಸೆಯಾಗಿದೆ.