ಹಾಲು ಉತ್ಪಾದಕರ ಸಹಕಾರ ಸಂಘಗಳ ಮಾಸಿಕ ಸಭೆ 
ಕೊಪ್ಪಳ

ಹೈನುಗಾರಿಕೆಗೆ ಹೆಚ್ಚಿನ ಆಸಕ್ತಿ ವಹಿಸಿ

ಪ್ರಮುಖ ಮುಖ್ಯಾಂಶಗಳು

  • ಮಂಜುನಾಥ್​ ಸಲಹೆ
ಕೊಪ್ಪಳ : ರೈತರ ಆರ್ಥಿಕ ಅಭಿವೃದ್ಧಿಗೆ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆಯೇ ಪ್ರಮುಖ ಆಧಾರವಾಗಿದ್ದು, ಹೈನುಗಾರಿಕೆಯನ್ನು ವೈಜ್ಞಾನಿಕವಾಗಿ ನಡೆಸುವ ಮೂಲಕ ಹಾಲಿನ ಉತ್ಪಾದನೆ ಹಾಗೂ ಆದಾಯವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಬಳ್ಳಾರಿ ಉಪ ಘಟಕದ ಹಾಲು ಉತ್ಪಾದಕರ ಸಹಕಾರ ಸಂಘದ ನಿರ್ದೇಶಕ ಮಂಜುನಾಥ ಹೇಳಿದರು.
ಜಿಲ್ಲೆಯ ಕುಷ್ಟಗಿಯಲ್ಲಿ ಶುಕ್ರವಾರ ಹಮ್ಮಿಕೊಂಡ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳ ಮಾಸಿಕ ಸಭೆಯಲ್ಲಿ ಮಾತನಾಡಿದರು.
ಉತ್ತಮ ತಳಿಯ ರಾಸುಗಳ ಸಾಕಣೆ, ಸಮತೋಲಿತ ಪೌಷ್ಟಿಕ ಆಹಾರ, ಸಮಯಕ್ಕೆ ಸರಿಯಾದ ಆರೋಗ್ಯ ತಪಾಸಣೆ ಹಾಗೂ ವೈಜ್ಞಾನಿಕ ಪಶುಪಾಲನೆ ಅಳವಡಿಸಿಕೊಂಡರೆ ಉತ್ತಮ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯವಾಗುತ್ತದೆ. ಉತ್ತರ ಕರ್ನಾಟಕ ಭಾಗದಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಹೆಚ್ಚಿಸಲು ರೈತರು ಹೈನುಗಾರಿಕೆಯಲ್ಲಿ ಹೆಚ್ಚಿನ ಆಸಕ್ತಿ ವಹಿಸಬೇಕು. ಉತ್ತಮ ಗುಣಮಟ್ಟದ ಹಾಲು ಸಂಗ್ರಹಣೆಗೆ ಆದ್ಯತೆ ನೀಡಿ. ಪಶುಗಳ ಆರೋಗ್ಯದಲ್ಲಿ ಯಾವುದೇ ಸಮಸ್ಯೆ ಕಂಡುಬಂದರೆ ತಕ್ಷಣ ಪಶುವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ನೀಡುವಂತೆ ರೈತರಿಗೆ ಮನವಿ ಮಾಡಲಾಯಿತು. ಆರೋಗ್ಯವಂತ ಪಶುಗಳಿಂದಲೇ ಗುಣಮಟ್ಟದ ಹಾಲು ಉತ್ಪಾದನೆ ಸಾಧ್ಯ ಎಂದು ತಿಳಿಸಿದರು.
ವಿಸ್ತರಣಾಧಿಕಾರಿ ಬಸವರಾಜ ಮಾತನಾಡಿ, ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು ತಮ್ಮ ಸಂಘದ ಫಿೇರುದಾರರಿಗೆ ಜುಲೈ ತಿಂಗಳೊಳಗೆ ಕಡ್ಡಾಯವಾಗಿ ಜನಶ್ರೀ ವಿಮೆ ಮಾಡಿಸಿ, ಯಾವುದೇ ಅರ್ಹ ಸದಸ್ಯರು ಯೋಜನೆಯ ಸೌಲಭ್ಯದಿಂದ ವಂಚಿತರಾಗದಂತೆ ಕ್ರಮ ಕೈಗೊಳ್ಳಬೇಕು. ಕಾರ್ಯದರ್ಶಿಗಳು ತಮ್ಮ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸಿ, ರೈತರಿಗೆ ಹಾಲಿನ ಗುಣಮಟ್ಟ, ಸ್ವಚ್ಛತೆ, ಪಶುಪಾಲನೆ ಹಾಗೂ ಹೈನುಗಾರಿಕೆ ಕುರಿತು ನಿರಂತರ ಅರಿವು ಮೂಡಿಸಬೇಕು ಎಂದರು. ವಿವಿಧ ಹಾಲು ಉತ್ಪಾದಕರ ಸಹಕಾರ ಸಂಘಗಳ ಕಾರ್ಯದರ್ಶಿಗಳು, ಸಿಬ್ಬಂದಿ ಹಾಗೂ ಪಶುವೈದ್ಯರು ಉಪಸ್ಥಿತರಿದ್ದರು.