ಹಂದ್ರಾಳ ಗ್ರಾಮದಲ್ಲಿ ನಡೆದ ರಾಸುಗಳ ಆರೋಗ್ಯ ಶಿಬಿರವನ್ನು ಪಾನಘಂಟಿ ಫೌಂಡೇಷನ್ ಮುಖ್ಯಸ್ಥೆ ಶಾರದಾ ರಾಘವೇಂದ್ರ ಪಾನಘಂಟಿ ಉದ್ಘಾಟಿಸಿದರು. ಪಶು ವೈದ್ಯಾಧಿಕಾರಿ ಕಳಕಪ್ಪ ಹೂಗಾರ, ಪಶು ಇಲಾಖೆಯ ಸಹಾಯಕ ನಿರ್ದೇಶಕ ವಿನೋದ ದಿವಟರ, ಮಹಿಳಾ ಧ್ವನಿ ಸಂಸ್ಥೆಯ ಪ್ರಿಯದರ್ಶಿನಿ ಮುಂಡರಗಿಮಠ ಇತರರಿದ್ದರು. 
ಕೊಪ್ಪಳ

ಆರ್ಥಿಕ ಸಬಲರಾಗಲು ರಾಸುಗಳ ಕಾಳಜಿವಹಿಸಿ

ಅಳವಂಡಿ: ಗ್ರಾಮೀಣ ಭಾಗದಲ್ಲಿ ಹೈನುಗಾರಿಕೆ ಜತೆಗೆ ಕೃಷಿ ಮೂಲ ಆದಾಯವಾಗಿದೆ. ರಾಸುಗಳ ಆರೈಕೆ ಮುಖ್ಯವಾಗಿದ್ದು, ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ನೀಡಬೇಕು. ಆರ್ಥಿಕ ಸಬಲರಾಗಲು ರಾಸುಗಳ ಆರೋಗ್ಯದ ಕಾಳಜಿವಹಿಸಿ ಎಂದು ಪಾನಘಂಟಿ ಫೌಂಡೇಷನ್ ಮುಖ್ಯಸ್ಥೆ ಶಾರದಾ ರಾಘವೇಂದ್ರ ಪಾನಘಂಟಿ ಹೇಳಿದರು.
ಸಮೀಪದ ಹಂದ್ರಾಳ ಗ್ರಾಮದಲ್ಲಿ ಪಾನಘಂಟಿ ಫೌಂಡೇಷನ್ ಭಾಗ್ಯನಗರ, ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಕೊಪ್ಪಳ ಹಾಗೂ ಭಾರತ ಸಂಜೀವಿನಿ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ರಾಸುಗಳ ಆರೋಗ್ಯ ಶಿಬಿರದಲ್ಲಿ ಮಾತನಾಡಿದರು. ಪಶು ವೈದ್ಯಾಧಿಕಾರಿ ಕಳಕಪ್ಪ ಹೂಗಾರ ಮಾತನಾಡಿ, ಹವಾಮಾನ ಬದಲಾವಣೆಯಿಂದ ರಾಸುಗಳ ಆರೋಗ್ಯದಲ್ಲಿ ಏರುಪೇರಾಗುತ್ತವೆ. ಸಾಂಕ್ರಾಮಿಕ ರೋಗಗಳ ಸೊಂಕು ನಿವಾರಣಾ ಕ್ರಮಗಳನ್ನು ಮುಂಜಾಗ್ರತಾ ಕ್ರಮವಾಗಿ ಪಾಲಿಸಿ. ರಾಸುಗಳ ಗರ್ಭಧಾರಣೆಯ ಸಮಯದಲ್ಲಿ ಆರೈಕೆ ಮಾಡಬೇಕು. ತುರ್ತು ಸಮಯದಲ್ಲಿ ಮತ್ತು ಕೃತಕ ಗರ್ಭಧಾರಣೆಗಾಗಿ ಸಹಾಯವಾಣಿಗೆ ಕರೆ ಮಾಡಿ ಸಲಹೆ ಹಾಗೂ ಚಿಕಿತ್ಸೆ ಪಡೆಯಿರಿ. ಆರೋಗ್ಯ ತಪಾಸಣೆಯಲ್ಲಿ ಚರ್ಮರೋಗ, ಬಂಜೆತನ, ಪೋಷಕಾಂಶ ಕೊರತೆ ಇರುವ 80ಕ್ಕೂ ಹೆಚ್ಚು ರಾಸುಗಳು ಕಂಡುಬಂದವು. 22 ಹಸುಗಳ ಗರ್ಭ ತಪಾಸಣೆ ಮಾಡಲಾಯಿತು. ಜಂತು ನಿರೋಧಕ ಔಷಧಿ ನೀಡಲಾಯಿತು. ಗ್ರಾಮಸ್ಥರು ಜಾನುವಾರುಗಳಿಗೆ ಚಿಕಿತ್ಸೆ ಪಡೆದು ಔಷಧೋಪಚಾರ ಹಾಗೂ ವೈದ್ಯರ ಸಲಹೆ ಪಡೆದರು.
ಪಶು ಇಲಾಖೆಯ ಸಹಾಯಕ ನಿರ್ದೇಶಕ ವಿನೋದ ದಿವಟರ, ಮಹಿಳಾ ಧ್ವನಿ ಸಂಸ್ಥೆಯ ಪ್ರಿಯದರ್ಶಿನಿ ಮುಂಡರಗಿಮಠ, ಪ್ರಮುಖರಾದ ಸಂತೋಷ, ಬಿ.ಎನ್.ಹೊರಪೇಟಿ, ಯಲ್ಲಪ್ಪ ಬೋಚನಹಳ್ಳಿ, ಮಂಜಪ್ಪ ಈಟಿ, ಮಲ್ಲಪ್ಪ, ಗಾಳೆಪ್ಪ, ಹನುಮಪ್ಪ, ಶಂಕ್ರಪ್ಪ, ಇತರರಿದ್ದರು.