ಕೊಪ್ಪಳದಲ್ಲಿ ಮುಂಗಾರು ಹಂಗಾಮಿನ ನಿರ್ವಹಣೆ ಕುರಿತು ಹಮ್ಮಿಕೊಂಡ ಸಭೆಯಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾಹಿತಿ ಪಡೆದರು. ಜಿಪಂ ಸಿಇಒ ವರ್ಣಿತ್​ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಎಎಸ್ಪಿ ಹೇಮಂತ ಕುಮಾರ, ಜಂಟಿ ಕೃಷಿ ನಿರ್ದೇಶಕ ಜಿ.ಡಿ ಕೃಷ್ಣಮೂರ್ತಿ ಇದ್ದರು. 
ಕೊಪ್ಪಳ

ಮುಂಗಾರು ಹಂಗಾಮು ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಿ

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ. ಸುರೇಶ ಇಟ್ನಾಳ ಸೂಚನೆ
ಕೊಪ್ಪಳ : ಜಿಲ್ಲೆಯಲ್ಲಿ ಪ್ರಸ್ತುತ ಭಿತ್ತನೆಯಾಗಿರುವ ಬೆಳೆಗಳಿಗೆ ಅವಶ್ಯ ರಸಗೊಬ್ಬರ ಮತ್ತು ಮುಂದೆ ಬಿತ್ತನೆಗೆ ಅಗತ್ಯ ಬೀಜ, ಗೊಬ್ಬರ ಸಮರ್ಪಕವಾಗಿ ಪೂರೈಸಿ ಮುಂಗಾರು ಹಂಗಾಮಿನ ನಿರ್ವಹಣೆಗೆ ಸೂಕ್ತ ಕ್ರಮ ಕೈಗೊಳ್ಳಿ ಎಂದು ಡಿಸಿ ಡಾ. ಸುರೇಶ ಬಿ. ಇಟ್ನಾಳ ಅಧಿಕಾರಿಗಳಿಗೆ ಸೂಚಿಸಿದರು.
ಡಿಸಿ ಕಛೇರಿ ಸಭಾಂಗಣದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಮುಂಗಾರು ಹಂಗಾಮಿನ ನಿರ್ವಹಣೆ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯಲ್ಲಿ ಒಟ್ಟಾರೆ 219 ಬಿತ್ತನೆ ಬೀಜ ಹಾಗೂ 99 ರಸಗೊಬ್ಬರ ಮಾದರಿಗಳನ್ನು ಗುಣಮಟ್ಟ ಪರಿಕ್ಷೇಗೆ ಒಳಪಡಿಸಲಾಗಿದ್ದು, ಅದರಲ್ಲಿ 8 ಬಿತ್ತನೆ ಬೀಜ ಮಾದರಿಗಳು ಕಳಪೆಯಾಗಿರುವ ಬಗ್ಗೆ ಕಂಡುಬಂದಿದ್ದು, ಈ ಬಗ್ಗೆ ಸಂಬಂಧಪಟ್ಟವರ ವಿರುದ್ಧ ಬೀಜ ಅಧಿನಿಯಮದನ್ವಯ ಕಾನೂನು ಕ್ರಮ ಕೈಗೊಳ್ಳಬೇಕು. ಜಿಲ್ಲೆಗೆ ಪೂರೈಕೆಯಾಗುವ ರಸಗೊಬ್ಬರವನ್ನು ರೈತರಿಗೆ ಸಮರ್ಪಕವಾಗಿ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಜಿಲ್ಲೆಯಾದ್ಯಂತ ಇರುವ ಬಿತ್ತನೆ ಬೀಜ ಕಾರ್ಯಪಡೆಯು ನಿರಂತರವಾಗಿ ಆಕಸ್ಮಿಕ ದಾಳಿಗಳನ್ನು ನಡೆಸಿ. ದಾಸ್ತಾನು ಮತ್ತು ಗುಣಮಟ್ಟವನ್ನು ಪರಿಶೀಲಿಸಬೇಕು ಎಂದರು.
ನಕಲಿ ಅಥವಾ ಕಳಪೆ ಕೃಷಿ ಪರಿಕರ ಮಾರಾಟ ಮಾಡುವುದು ಕಂಡುಬಂದಲ್ಲಿ, ಅಂತಹ ಮಾರಾಟಗಾರರ ಪರವಾನಗೆ ಅಮಾನತುಗೊಳಿಸಿ. ಸಂಬಂಧಿಸಿದ ಕಾನೂನು ಪ್ರಕಾರ ಕ್ರಿಮಿನಲ್​ ಮೊಕದ್ದಮೆ ದಾಖಲಿಸಬೇಕು. ರೈತರು ಕೃಷಿ ಪರಿಕರ ಖರೀದಿಸುವಾಗ ಕಡ್ಡಾಯವಾಗಿ ಅಧಿಕೃತ ರಸೀದಿ ಪಡೆಯುವಂತೆ ಮತ್ತು ಲೇಬಲ್​ ಆಧಾರಿತ ಮಾಹಿತಿ ಗಮನಿಸುವಂತೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಮೂಲಕ ರೈತರಿಗೆ ಜಾಹೃತಿ ಮೂಡಿಸಬೇಕು. ಫಸಲ್​ ಭೀಮಾ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಒತ್ತು ಕೊಡಿ. ಬೆಳೆ ನಷ್ಟ ಅನುಭವಿಸಿದಲ್ಲಿ ಬೆಳೆವಿಮೆ ಸೌಲಭ್ಯ ಪಡೆಯಲು ರೈತರಿಗೆ ಸಲಹೆ ನೀಡಿ ಎಂದು ಹೇಳಿದರು.
ಜಿಪಂ ಸಿಇಒ ವರ್ಣಿತ್​ ನೇಗಿ, ಉಪ ಅರಣ್ಯ ಸಂರಕ್ಷಣಾಧಿಕಾರಿ ನಿರ್ಮಲಾ, ಎಎಸ್ಪಿ ಹೇಮಂತ ಕುಮಾರ, ಜಂಟಿ ಕೃಷಿ ನಿರ್ದೇಶಕ ಜಿ.ಡಿ ಕೃಷ್ಣಮೂರ್ತಿ, ತೋಟಗಾರಿಕೆ ಜಂಟಿ ನಿರ್ದೇಶಕ ಕೃಷ್ಣ ಸಿ. ಉಕ್ಕುಂದ, ಉಪ ಕೃಷಿ ನಿರ್ದೇಶಕ ಎಲ್​. ಸಿದ್ದೇಶ್ವರ ಇತರರಿದ್ದರು.

ಸಮಗ್ರ ಸಾವಯವ ಕೃಷಿ ಪ್ರೋತ್ಸಾಹಿಸಿ

ಅತಿಯಾದ ನೀರು, ರಸಗೊಬ್ಬರ ಬಳಕೆ ಕಾರಣ ಭೂಮಿ ಲವತ್ತತೆ ಕಳೆದುಕೊಳ್ಳುತ್ತಿದೆ. ಜನರ ಆರೋಗ್ಯದ ಮೇಲೂ ದುಷ್ಪರಿಣಾಮ ಬೀರುತ್ತಿದೆ. ಸಾವಯವ ಕೃಷಿಗೆ ಅದ್ಯತೆ ನೀಡಬೇಕಿದೆ. ಈ ಬಗ್ಗೆ ಜಿಲ್ಲೆಯ ರೈತರಿಗೆ ನಿರಂತರ ಅರಿವು ಮೂಡಿಸಿ. ರೇಷ್ಮೇ, ತೋಟಗಾರಿಕೆ, ಪಶುಪಾಲನೆ ಪ್ರಮಾಣ ಹೆಚ್ಚಿಸಿ. ಸಮಗ್ರ ಸಾವಯವ ಕೃಷಿ ಉತ್ತೇಜನಕ್ಕೆ ಕ್ರಮ ಕೈಗೊಳ್ಳಿ. ಬೆಳೆಗೆ ಅಗತ್ಯ ಪೋಷಕಾಂಶ ನೀಡಲು ತಿಳಿಸಿ. ರಸಗೊಬ್ಬರ ಬದಲು ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ, ಹಿಂಡಿ ಗೊಬ್ಬರ, ಎರೆಹುಳಗೊಬ್ಬರ, ಜೈವಿಕ ಗೊಬ್ಬರಗಳ ಬಳಕೆಗೆ ಮಾರ್ಗದರ್ಶನ ಮಾಡುವಂತೆ ಡಿಸಿ ಅಧಿಕಾರಿಗಳಿಗೆ ಸೂಚಿಸಿದರು.