ನವಲಿಯಲ್ಲಿ ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ಕೈಗೊಂಡ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿಗಳು, ಪಾಲಕರೊಂದಿಗೆ ಬಿಇಒ ನಟೇಶ್ ಚರ್ಚಿಸಿದರು. ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ, ವೀರೇಶ ಛಲಗಾರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ಕೃಷ್ಣ ಇತರರಿದ್ದರು.
- ಪ್ರೌಢಶಾಲೆ ವಿದ್ಯಾರ್ಥಿಗಳು, ಪಾಲಕರ ಆಗ್ರಹ
- ಕನಕಗಿರಿ ನವಲಿ ಎಸ್‌ಎಫ್‌ಐ ಪ್ರತಿಭಟನೆ
ಕನಕಗಿರಿ: ಸಮಯಕ್ಕೆ ಬಾರದ, ಮೂಲಸೌಕರ್ಯ ಒದಗಿಸದ ಮುಖ್ಯಶಿಕ್ಷಕನನ್ನ್ನು ಅಮಾನತು ಮಾಡಲು ಆಗ್ರಹಿಸಿ ನವಲಿಯಲ್ಲಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು, ಪಾಲಕರು ಎಸ್‌ಎಫ್‌ಐ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಶಾಲೆಯಲ್ಲಿ ಮಕ್ಕಳಿಗೆ ಸರಿಯಾಗಿ ಊಟ ನೀಡುತ್ತಿಲ್ಲ. ಶೌಚಗೃಹ ಸ್ವಚ್ಛತೆಯಿಲ್ಲ, ಕುಡಿವ ನೀರು ಶುದ್ಧವಾಗಿಲ್ಲ, ಮಕ್ಕಳು- ಪಾಲಕರೊಂದಿಗೆ ಮುಖ್ಯಶಿಕ್ಷಕ ಸ್ಪಂದಿಸುವುದಿಲ್ಲ. ಮಕ್ಕಳ ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡದ ಮುಖ್ಯಶಿಕ್ಷಕ ಅಜ್ಮೀರ್ ಉಮಲೂಟಿಯವರು ನಮಗೆ ಬೇಡವೆಂದು ಮಕ್ಕಳೊಂದಿಗೆ ಪಾಲಕರು ಆಗ್ರಹಿಸಿದರು.
ಮಾಹಿತಿ ಅರಿತು ಸ್ಥಳಕ್ಕೆ ಆಗಮಿಸಿದ ಬಿಇಒ ನಟೇಶ್, ಪರಿಸ್ಥಿತಿ ತಿಳಿಗೊಳಿಸಲು ಹರಸಾಹಸಪಟ್ಟರು. ಕೊನೆಗೆ ಪ್ರತಿಭಟನಾನಿರತರೊಂದಿಗೆ ಚರ್ಚಿಸಿದ ಅವರು, ಮುಖ್ಯಶಿಕ್ಷಕ ವಿರುದ್ಧ ಕ್ರಮ ತೆಗೆದುಕೊಳ್ಳಲು ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವ ಬಗ್ಗೆ ಭರವಸೆ ನೀಡಿದ ಮೇಲೆ ಪ್ರತಿಭಟನೆ ಹಿಂಪಡೆಯಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ನಾಗಪ್ಪ, ವೀರೇಶ ಛಲಗಾರ, ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಶಿವಕುಮಾರ ಈಚನಾಳ, ಗ್ರಾಮಸ್ಥರಾದ ಹನುಮೇಶ, ಯಮನೂರಪ್ಪ, ಮೆಹಬೂಬ್, ಸಾಹೀದ್, ಭೋಗೇಶ, ವೀರೇಶ ಇತರರಿದ್ದರು.
ನವಲಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಮಕ್ಕಳು ಜಗಳವಾಡಿಕೊಂಡಿದ್ದು, ಸ್ಥಳಕ್ಕೆ ತೆರಳಿ ಪರಿಶೀಲಿಸಲಾಗಿದೆ. ಮುಖ್ಯಶಿಕ್ಷಕ ಸರಿಯಾಗಿ ಶಾಲೆಗೆ ಬಾರದಿರುವುದು ಸೇರಿ ಹಲವು ದೂರುಗಳು ಕೇಳಿಬಂದಿವೆ. ಮುಖ್ಯಶಿಕ್ಷಕ ಇಲಾಖೆಯ ಕೆಲಸಗಳ ಕುರಿತು ಮೇಲಧಿಕಾರಿಗಳಿಗೂ ಸಮರ್ಪಕ ಮಾಹಿತಿ ನೀಡುತ್ತಿರಲಿಲ್ಲ. ಅವರನ್ನು ಬೇರೆ ಶಾಲೆಗೆ ನಿಯೋಜಿಸಲಾಗುವುದು. ಅಲ್ಲದೆ, ಮೇಲ್ನೋಟಕ್ಕೆ ತಪ್ಪು ಕಂಡುಬಂದಿರುವುದರಿಂದ ಕ್ರಮಕ್ಕಾಗಿ ಡಿಡಿಪಿಐ ಅವರಿಗೆ ವರದಿ ಸಲ್ಲಿಸಲಾಗುವುದು.