ಕನಕಗಿರಿ ತಾಪಂ ಸಭಾಂಗಣದಲ್ಲಿ ಕುಡಿವ ನೀರಿನ ಟಾಸ್ಕ್‌ಫೋರ್ಸ್ ಸಮಿತಿ ಸಭೆ ನಡೆಯಿತು. ತಹಸೀಲ್ದಾರ್ ವಿಶ್ವನಾಥ ಮುರುಡಿ, ತಾಪಂ ಇಒ ರಾಜಶೇಖರ, ಪಿಡಿಒಗಳಾದ ನಾಗೇಶ, ಕನಕಪ್ಪ ಇತರರಿದ್ದರು.
ನಿಗದಿತ ಸಮಯಕ್ಕೆ ನೀರು ಸರಬರಾಜು ಮಾಡಿ
ಕನಕಗಿರಿ: ಗ್ರಾಮೀಣ ಭಾಗದಲ್ಲಿ ಕುಡಿವ ನೀರಿನ ಅಭಾವ ಉಂಟಾಗದಂತೆ ಗ್ರಾಪಂ ಆಡಳಿತ ಮುನ್ನೆಚ್ಚರಿಕೆ ವಹಿಸಬೇಕು. ಸಮಸ್ಯೆ ಉಂಟಾದಲ್ಲಿ ಪಿಡಿಒಗಳನ್ನೇ ನೇರ ಹೊಣೆ ಮಾಡಲಾಗುವುದು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಎಚ್ಚರಿಸಿದರು.
ನಗರದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕುಡಿವ ನೀರಿನ ಟಾಸ್ಕ್‌ಫೋರ್ಸ್ ಸಮಿತಿ ಸಭೆಯಲ್ಲಿ ಮಾತನಾಡಿದರು. ಮುಂದಿನ ದಿನಗಳಲ್ಲಿ ಬೋರ್‌ವೆಲ್‌ಗಳಲ್ಲಿ ಅಂತರ್ಜಲ ಕೊರತೆಯಾಗುವ ಸಂಭವವಿದೆ. ಆದ್ದರಿಂದ ಕುಡಿವ ನೀರಿನ ಪೂರೈಕೆ ಕುರಿತು ಗ್ರಾಪಂ ಸಿಬ್ಬಂದಿ ಜಾಗೃತಿ ವಹಿಸಬೇಕು.
ಸಾರ್ವಜನಿಕರ ಅನುಕೂಲಕ್ಕಾಗಿ ಸಹಾಯವಾಣಿ ಆರಂಭಿಸಬೇಕು. ವಾಟರ್ ಮನ್‌ಗಳು ಬೋರ್‌ವೆಲ್‌ಗಳಲ್ಲಿ ನೀರು ಕಡಿಮೆಯಾಗಿರುವ ಕುರಿತು ಮಾಹಿತಿ ನೀಡಬೇಕು. ಸಮಯ ನಿಗದಿಪಡಿಸಿ ನೀರು ಸರಬರಾಜು ಮಾಡಬೇಕು. ನೀರು ಪೋಲಾಗದಂತೆ ಕ್ರಮ ವಹಿಸಬೇಕು.
ಯಾರೇ ಹೇಳಿದರು ನಿಗದಿತ ಸಮಯ ಮೀರಿ ನೀರು ಪೂರೈಸುವಂತಿಲ್ಲ. ಮುಖ್ಯ ಕಾರ್ಯಕ್ರಮಗಳಿದ್ದರೆ ಮಾತ್ರ ನೀರು ಪೂರೈಸಿ ಎಂದು ಸೂಚಿಸಿದರು. ತಾಲೂಕಿನ 11 ಗ್ರಾಪಂ ವ್ಯಾಪ್ತಿಯಲ್ಲಿ ನೀರಿನ ಅಭಾವ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಪ್ರಕಟವಾದಲ್ಲಿ ಪಿಡಿಒಗಳೇ ನೇರ ಹೋಣೆ ಎಂದರು.
ತಾಪಂ ಇಒ ಕೆ.ರಾಜಶೇಖರ್ ಮಾತನಾಡಿ, ಸಿಬ್ಬಂದಿ ಕೆಲಸವನ್ನು ಸರಿಯಾಗಿ ನಿರ್ವಹಿಸಿದರೆ ಗ್ರಾಮಗಳಲ್ಲಿ ಸಮಸ್ಯೆ ಉಂಟಾಗುವುದಿಲ್ಲ. ಆದ್ದರಿಂದ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಿ ಎಂದು ಸೂಚಿಸಿದರು.
ಪಿಡಿಒಗಳಾದ ನಾಗೇಶ, ಕನಕಪ್ಪ, ಲಕ್ಷ್ಮಣ ನಾಯಕ, ಅಮರೇಶ ರಾಠೋಡ್, ಕಾರ್ಯದರ್ಶಿಗಳಾದ ಯಂಕೋಬ, ಹನುಮಮ್ಮ ಇತರರಿದ್ದರು.