ಆನೆಗೊಂದಿಯ ನವವೃಂದಾವನಗಡ್ಡಿಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ನಿಮಿತ್ತ ವೃಂದಾವನಕ್ಕೆ ಗುರುವಾರ ವಿಶೇಷ ಪೂಜೆ ಸಲ್ಲಿಸಲಾಯಿತು. 
ಕೊಪ್ಪಳ

ಸುಧೀಂದ್ರ ತೀರ್ಥರ ಮಧ್ಯಾರಾಧನೆ ಸಂಪನ್ನ

ಕುರುವತ್ತಿ ಶ್ರೀಕಾಂತಪ್ಪ
ಗಂಗಾವತಿ: ತಾಲೂಕಿನ ಆನೆಗೊಂದಿಯ ಐತಿಹಾಸಿಕ ಪ್ರಸಿದ್ಧ ನವವೃಂದಾವನಗಡ್ಡಿಯಲ್ಲಿ ಶ್ರೀ ಸುಧೀಂದ್ರ ತೀರ್ಥರ ಮಧ್ಯಾರಾಧನೆ ಭಕ್ತಿ, ಶ್ರದ್ಧೆಯಿಂದ ಗುರುವಾರ ನೆರವೇರಿಸಲಾಯಿತು.
ಮಂತ್ರಾಲಯ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರ ಆಜ್ಞಾನುಸಾರ ಹಮ್ಮಿಕೊಂಡಿದ್ದು, ಮಧ್ವ ಪರಂಪರೆಯ ಶ್ರೀ ಸುಧೀಂದ್ರ ತೀರ್ಥರ ವೃಂದಾವನಕ್ಕೆ ವಿಶೇಷ ಪೂಜೆ ಸಲ್ಲಿಸಲಾಯಿತು. ವೃಂದಾವನಕ್ಕೆ ನಿರ್ಮಾಲ್ಯ ವಿಸರ್ಜನೆ, ಪಂಚಾಮೃತಾಭಿಷೇಕ, ವಿಶೇಷ ಹೂವಿನ ಅಲಂಕಾರ, ರಜತ ಕವಚ ಅಲಂಕಾರ, ಸಾಮೂಹಿಕ ಪಾರಾಯಣ, ಭಜನೆ, ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿತರಣೆ ಸೇವೆ ಜರುಗಿತು.
ನಂಜನಗೂಡಿನ ಪಂ. ವೆಂಕಟೇಶಾಚಾರ್ ನೇತೃತ್ವದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಂಡಿತರಾದ ವೇಣುಗೋಪಾಲಾಚಾರ್, ಭೀಮಸೇನಾಚಾರ್ ಉಪನ್ಯಾಸ ನೀಡಿದರು.
ಆನೆಗೊಂದಿ ರಾಯರ ಮಠದ ವ್ಯವಸ್ಥಾಪಕ ಸುಮಂತ ಕುಲ್ಕರ್ಣಿ, ಅರ್ಚಕರಾದ ಶ್ರೀನಿವಾಸಾಚಾರ್ಯ, ನರಸಿಂಹಾಚಾರ್ ಬಳ್ಳಾರಿ, ಹೊಸಪೇಟೆ ರಾಯರ ಮಠದ ವ್ಯವಸ್ಥಾಪಕ ಗುರುರಾಜಾಚಾರ್, ಪ್ರಮುಖರಾದ ನವಲಿ ಪ್ರಲ್ಹಾದರಾವ್, ಸುಧೀರ ಕುಲ್ಕರ್ಣಿ, ಸುಶಿಲೇಂದ್ರ ಆಚಾರ್, ಪವನ ಆಚಾರ್, ಶ್ರೀನಿವಾಸ ಸಂಪೂರ್ತಿ, ಶ್ಯಾಮಾಚಾರ್, ಅನಂತ ಪುರಾಣಿಕ, ಐ.ಕೆ.ಪವನ್ ಆಚಾರ್, ಕೃಷ್ಣಮೂರ್ತಿ, ಶ್ರೀಪಾದರಾಜ ಮಠದ ಆನೆಗೊಂದಿ ಶಾಖೆ ವ್ಯವಸ್ಥಾಪಕ ವಿಜಯ್ ದೇಸಾಯಿ ಇತರರಿದ್ದರು.