ಕೊಪ್ಪಳ : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಕಾರ್ಯದ ಅಂಗವಾಗಿ ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ಮತದಾರರ ಅನುಕೂಲಕ್ಕಾಗಿ 10 ಮತದಾರರ ಸಹಾಯ ಕೇಂದ್ರಗಳನ್ನು ಆರಂಭಿಸಲಾಗಿದೆ ಎಂದು ಪೌರಾಯುಕ್ತ ಮಂಜುನಾಥ ಗುಂಡೂರ್ ತಿಳಿಸಿದ್ದಾರೆ.
ನಗರ ವ್ಯಾಪ್ತಿಯ ಬೂತ್ ಮಟ್ಟದ ಅಧಿಕಾರಿಗಳು ಈಗಾಗಲೇ ಮನೆ ಮನೆಗೆ ಭೇಟಿ ನೀಡಿ ಎನ್ಯೂಮರೇಷನ್ ಫಾರಂಗಳನ್ನು ವಿತರಿಸಿದ್ದು, ಮತದಾರರು ಅವುಗಳನ್ನು ಸರಿಯಾದ ಮಾಹಿತಿಯೊಂದಿಗೆ ಭರ್ತಿ ಮಾಡಿ ತಮ್ಮ ವ್ಯಾಪ್ತಿಯ ಬಿಎಲ್ಒಗಳಿಗೆ ಶೀಘ್ರ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಫಾರಂ ಭರ್ತಿ ಮಾಡುವ ವೇಳೆ ಯಾವುದೇ ಮಾಹಿತಿ ಅಥವಾ ತಾಂತ್ರಿಕ ಸಹಾಯ ಅಗತ್ಯವಿದ್ದಲ್ಲಿ ಸಂಬಂಧಿಸಿದ ಬಿಎಲ್ಒಗಳನ್ನು ಸಂಪರ್ಕಿಸಿ, ಸಮೀಪದ ಮತದಾರರ ಸಹಾಯ ಕೇಂದ್ರದಲ್ಲಿಯೂ ನೆರವು ಪಡೆಯಬಹುದು. ಯಾರಿಗಾದರೂ ಎನ್ಯೂಮರೇಷನ್ ಫಾರಂ ತಲುಪದಿದ್ದರೆ ನಗರಸಭೆಗೆ ದೂರು ದಾಖಲಿಸಬಹುದಾಗಿದೆ.
ನಗರಸಭೆ ವ್ಯಾಪ್ತಿಯಲ್ಲಿ ಸರ್ಕಾರಿ ಹಿರಿಯ ಉರ್ದು ಪ್ರಾಥಮಿಕ ಶಾಲೆ, ನಿರ್ಮಿತಿ ಕೇಂದ್ರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬ್ರಹ್ಮನವಾಡಿ, ಅಂಬೇಡ್ಕರ್ ಭವನ ಸಮೀಪ, ತಾಪಂ ಕಚೇರಿ, ನಗರಸಭೆ ಕಚೇರಿ, ಹೊಸ ಬಸ್ ನಿಲ್ದಾಣ ಎದುರಿನ ನಗರಸಭೆ ವಾಣಿಜ್ಯ ಸಂಕೀರ್ಣ, ತೋಟಗಾರಿಕೆ ಇಲಾಖೆ ಕಚೇರಿ, ಜೆಸ್ಕಾಂ ಕಾರ್ಯಪಾಲಕ ಅಭಿಯಂತರರ ಕಚೇರಿ ಹಾಗೂ ಬಸವೇಶ್ವರ ವೃತ್ತದ ಸಮೀಪದ ಪಿ.ಸಿ.ಎ. ಮತ್ತು ಆರ್.ಡಿ. ಬ್ಯಾಂಕ್ ಕಟ್ಟಡ ಸೇರಿದಂತೆ ಒಟ್ಟು 10 ಕೇಂದ್ರಗಳಲ್ಲಿ ಸೇವೆ ಲಭ್ಯವಿದೆ.
ನಿಗದಿತ ಅವಧಿಯೊಳಗೆ ಭರ್ತಿ ಮಾಡಿದ ಎನ್ಯೂಮರೇಷನ್ ಫಾರಂ ಸಲ್ಲಿಸದಿದ್ದರೆ ಮತದಾರರ ಪಟ್ಟಿಯಿಂದ ಹೆಸರು ಕೈಬಿಡುವ ಸಾಧ್ಯತೆ ಇರುವುದರಿಂದ, ಮತದಾನದ ಹಕ್ಕು ಕಳೆದುಕೊಳ್ಳದಂತೆ ಎಲ್ಲ ಅರ್ಹ ಮತದಾರರು ಬಿಎಲ್ಒ ಅಥವಾ ಸಮೀಪದ ಸಹಾಯ ಕೇಂದ್ರವನ್ನು ಸಂಪರ್ಕಿಸಿ ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವಂತೆ. ನಗರಸಭೆ ಪೌರಾಯುಕ್ತರು ತಿಳಿಸಿದ್ದಾರೆ.