ಕನಕಗಿರಿ ಪಟ್ಟಣದ ಸ.ಪ.ಪೂ. ಕಾಲೇಜಿನಲ್ಲಿ ಮಾದಕ ವಸ್ತುಗಳ ಜಾಗೃತಿ ಕಾರ್ಯಕ್ರಮ ಮಂಗಳವಾರ ನಡೆಯಿತು. ಎಎಸ್‌ಐ ರಾಜು ಹಂಚಾಟೆ, ಕಾಲೇಜಿನ ಪ್ರಾಚಾರ್ಯ ಅಮರೇಶ್ ದೇವರಾಳ, ಪೇದೆಗಳಾದ ಸಿದ್ದರಾಮಯ್ಯ, ರವಿಚಂದ್ರ ಇದ್ದರು.
ಕನಕಗಿರಿ: ವಿದ್ಯಾರ್ಥಿಗಳು ಮಾದಕ ವ್ಯಸನಗಳಿಂದ ದೂರವಿದ್ದು, ಅಧ್ಯಯನದಲ್ಲಿ ಮನಸ್ಸು ಕೇಂದ್ರೀಕರಿಸುವತ್ತ ಹೆಜ್ಜೆ ಇಡಬೇಕು ಎಂದು ಎಎಸ್‌ಐ ರಾಜು ಹಂಚಾಟೆ ಹೇಳಿದರು.
ಅಂತಾರಾಷ್ಟ್ರೀಯ ಮಾದಕ ವಸ್ತುಗಳ ದುರುಪಯೋಗ ಮತ್ತು ಸಾಗಣೆ ವಿರೋಧ ದಿನ ನಿಮಿತ್ತ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪೊಲೀಸ್ ಇಲಾಖೆ ಹಾಗೂ ಎನ್‌ಎಸ್‌ಎಸ್ ಸಹಯೋಗದಲ್ಲಿ ಮಂಗಳವಾರ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಸಕ್ತ ಯುವ ಪೀಳಿಗೆ ಹಾಗೂ ವಿದ್ಯಾರ್ಥಿಗಳು ಹೆಚ್ಚಾಗಿ ಮಾದಕ ವಸ್ತುಗಳನ್ನು ಬಳಸುತ್ತಿದ್ದು, ಅವುಗಳಿಂದ ದೂರ ಉಳಿಯಬೇಕಿದೆ. ಮಾದಕ ವಸ್ತುಗಳ ಬಳಕೆಯಿಂದ ದೈಹಿಕ ಮತ್ತು ಮಾನಸಿಕ ಹಾನಿಗಳು ಹೆಚ್ಚಾಗುತ್ತಿದ್ದರಿಂದ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಾದ್ಯಂತ ಶಾಲಾ ವಿದ್ಯಾರ್ಥಿಗಳ ಜತೆ ವಿಡಿಯೋ ಸಂವಾದ ನಡೆಸಿದ್ದು, ಅದರಂತೆ ಸ್ಥಳೀಯವಾಗಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಕಾಲೇಜಿನ ಪ್ರಾಚಾರ್ಯ ಅಮರೇಶ್ ದೇವರಾಳ ಮಾತನಾಡಿ, ಯುವಕರು ಕ್ರೀಡೆ, ಯೋಗ ಹಾಗೂ ಉತ್ತಮ ಹವ್ಯಾಸಗಳನ್ನು ಅಳವಡಿಸಿಕೊಂಡು ಆರೋಗ್ಯಕರ ಜೀವನ ನಡೆಸಬೇಕು. ಮಾದಕ ವಸ್ತುಗಳು ಮತ್ತು ಗುಟ್ಖಾದಿಂದ ದೂರವಿರಬೇಕು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮಾದಕ ವಸ್ತುಗಳ ದುಷ್ಪರಿಣಾಮದ ಬಗ್ಗೆ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲು ಉಪನ್ಯಾಸ ಮತ್ತು ಪೋಸ್ಟರ್‌ಗಳ ಪ್ರದರ್ಶನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪೇದೆಗಳಾದ ಸಿದ್ದರಾಮಯ್ಯ, ರವಿಚಂದ್ರ, ಹಿರೇ ಲಿಂಗಪ್ಪ, ಶಿವಪುತ್ರಪ್ಪ ಇದ್ದರು.