ಕೊಪ್ಪಳ ಜಿಲ್ಲಾಸ್ಪತ್ರೆ ಮುಂಭಾಗದ ರಸ್ತೆ ಸಂಚಾರ ತಡೆದು ಮೃತ ಆಕಾಶ ಹರಿಜನ ಕುಟುಂಬಸ್ಥರು ಪ್ರತಿಭಟನೆ ನಡೆಸಿದರು.ಖರ್ಚು
ಕೊಪ್ಪಳ: ದದೇಗಲ್ ಹಾಸ್ಟೆಲ್ ವಿದ್ಯಾರ್ಥಿ ಆಕಾಶ ಹರಿಜನ (17) ಬಿಸಿಲಿನ ಬೇಗೆ ತಣಿಸಲು ತಾಲೂಕಿನ ಮಾದಿನೂರು ಗ್ರಾಮಕ್ಕೆ ತೆರಳುವ ರಸ್ತೆಯ ಸಮೀಪದಲ್ಲಿರುವ ಕೆರೆಯಲ್ಲಿ ಈಜಾಡಲು ಹೋಗಿ ಭಾನುವಾರ ಮೃತಪಟ್ಟಿದ್ದಾರೆ.
ಜಿಲ್ಲೆಯ ಕುಕನೂರು ತಾಲೂಕಿನ ಮನ್ನಾಪುರದ ಆಕಾಶ ಜಿಲ್ಲಾಕೇಂದ್ರದ ಸಮೀಪದಲ್ಲಿರುವ ದದೇಗಲ್‌ನ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಎರಡನೇ ವರ್ಷ ಓದುತ್ತಿದ್ದ. ಬೇಸಿಗೆ ಕಾರಣ ನಿತ್ಯ ಹತ್ತಾರು ಮಕ್ಕಳು ಕೆರೆಯಲ್ಲಿ ಈಜಾಡಲು ಹೋಗುವುದು ಸಾಮಾನ್ಯ. ಭಾನುವಾರವೂ ಹೋದಾಗ ಘಟನೆ ನಡೆದಿದೆ.
ಬೆಳಿಗ್ಗೆ 11ಗಂಟೆಗೆ ಘಟನೆ ನಡೆದಿದ್ದು ಸಂಜೆ 5ಗಂಟೆಗೆ ಮೃತದೇಹ ಸಿಕ್ಕ ಮೇಲೂ ತಾಲೂಕು ಹಂತದ ಯಾವ ಅಧಿಕಾರಿಗಳು ಘಟನಾ ಸ್ಥಳಕ್ಕೆ ಬರಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಘಟನೆ ನಡೆದಿದೆ. ಹಾಸ್ಟೆಲ್ ವಾರ್ಡನ್‌ನನ್ನು ಕೆಲಸದಿಂದ ಅಮಾನತು ಮಾಡಿ ಬಂಧಿಸಬೇಕು ಎಂದು ಮೃತ ಆಕಾಶ ಚಿಕ್ಕಪ್ಪ ದೇವಪ್ಪ ಹರಿಜನ ಆಗ್ರಹಿಸಿದರು.
ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟನೆ: ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನ್ನಾಪುರ ಗ್ರಾಮದ ನೂರಾರು ಜನ ಮೃತ ದೇಹದೊಂದಿಗೆ ಜಿಲ್ಲಾಧಿಕಾರಿ ಕಚೇರಿಗೆ ತೆರಳುತ್ತಿದ್ದಾಗ ಪೋಲಿಸರು ಆಂಬುಲೆನ್ಸ್ ತಡೆದು ಜಿಲ್ಲಾಸ್ಪತ್ರೆ ಕಡೆಗೆ ತಿರುಗಿಸಿ ಎಂದು ಜೋರು ಮಾಡಿದರು.
ಕೋಪಗೊಂಡ ಮೃತನ ಸಂಬಂಧಿಕರು ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದರು.. ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಉಪವಿಭಾಗಾಧಿಕಾರಿ ಕ್ಯಾಪ್ಟನ್ ಮಹೇಶ ಎಲ್ಲರನ್ನೂ ಸಮಾಧಾನಪಡಿಸಿದರು. ಮುಂದಿನ ಕಾರ್ಯ ನಡೆಯಲು ಅನುವು ಮಾಡಿಕೊಡಬೇಕು. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು. ಬಳಿಕ ಮೃತ ದೇಹದೊಂದಿಗೆ ಮುಂದಿನ ಕಾರ್ಯಕ್ಕೆ ಆಸ್ಪತ್ರೆಗೆ ತೆರಳಿದರು.