ಅನ್ನಭಾಗ್ಯದ ಅಕ್ಕಿ ಪಡೆಯಲು ಕನಕಗಿರಿ ತಾಲೂಕಿನ ಕಲಿಕೇರಾ ಗ್ರಾಮದಲ್ಲಿ ರಾತ್ರಿ ವೇಳೆ ಚಳಿಯಲ್ಲಿಯೂ ನಿಂತಿರುವ ವೃದ್ಧರು, ಮಹಿಳೆಯರು.
- ರಾತ್ರಿಯೂ ಪಾಳೆ ನಿಲ್ಲುತ್ತಿರುವ ಕನಕಗಿರಿಯ ಜನ
- ನಿವಾರಣೆಯಾಗದ ಸರ್ವರ್ ಸಮಸ್ಯೆ
ಕನಕಗಿರಿ: ಕಳೆದ ಮೂರ್ನಾಲ್ಕು ತಿಂಗಳಿಂದ ಕಾಡುತ್ತಿರುವ ಸರ್ವರ್ ಸಮಸ್ಯೆಯಿಂದ ಬಡವರಿಗೆ ಅನ್ನಭಾಗ್ಯ ಯೋಜನೆ ಅಕ್ಕಿ ಸಕಾಲಕ್ಕೆ ದೊರೆಯುತ್ತಿಲ್ಲ. ಇದರಿಂದ ಕೆಲಸ ಬಿಟ್ಟು ನ್ಯಾಯಬೆಲೆ ಅಂಗಡಿಗಳ ಮುಂದೆ ಪಡಿತರದಾರರು ಕಾದು ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಸರ್ಕಾರವು ಎಪಿಎಲ್ ಹೊರತುಪಡಿಸಿ ಬಿಪಿಎಲ್, ಅಂತ್ಯೋದಯ ಕಾರ್ಡುದಾರರಿಗೆ ಉಚಿತವಾಗಿ ಅಕ್ಕಿಯನ್ನು ವಿತರಿಸುತ್ತಿದೆ. ಈ ಪೈಕಿ ತಾಲೂಕಿನಲ್ಲಿ ಒಟ್ಟು 24 ನ್ಯಾಯಬೆಲೆ ಅಂಗಡಿಗಳಿದ್ದು, 21,744 ಬಿಪಿಎಲ್ ಪಡಿತರ ಚೀಟಿಗಳ 83,394 ಫಲಾನುಭವಿಗಳಿಗೆ ಹಾಗೂ 2,141 ಅಂತ್ಯೋದಯ ಪಡಿತರ ಚೀಟಿಗಳ 8,504 ಫಲಾನುಭವಿಗಳಿಗೆ ಉಚಿತ ಅನ್ನಭಾಗ್ಯದ ಅಕ್ಕಿ ಹಂಚಿಕೆ ಮಾಡಲಾಗುತ್ತಿದ್ದು, 1,690 ಎಪಿಎಲ್ ಕಾರ್ಡ್‌ಗಳ 4,903 ಫಲಾನುಭವಿಗಳಿಗೆ ಅಕ್ಕಿ ದೊರೆಯುವುದಿಲ್ಲ ಎಂಬ ಮಾಹಿತಿ ಇದೆ.
ಪಡಿತರ ವಿತರಣೆಗಾಗಿ ಬಳಸುವ ಇಲಾಖೆಯ ತಂತ್ರಾಂಶ ಸಮಸ್ಯೆ ಕಳೆದ ಮೂರ್ನಾಲ್ಕು ತಿಂಗಳಿಂದ ಕಾಡುತ್ತಿದೆ. ಇದರಿಂದ ತಾಲೂಕಿನ ಕಲಿಕೇರಿ, ಕಾಟಾಪುರ, ಬೆನಕನಾಳ, ಸುಳೇಕಲ್, ಶಿರವಾರ, ಗೋಡಿನಾಳ, ಚಿಕ್ಕಖೇಡ ಸೇರಿ ತಾಲೂಕಿನಾದ್ಯಂತ ತಿಂಗಳ ಕೊನೆಯಾದರೂ ಪಡಿತರದಾರರಿಗೆ ಧಾನ್ಯ ಸಿಗುತ್ತಿಲ್ಲ. ಇನ್ನು ಕೆಲವೆಡೆ ಮೂರ್ನಲ್ಕು ಗ್ರಾಮಗಳ ನಡುವೆ ಓರ್ವ ವಿತರಕರಿದ್ದು, ಸಂಬಂಧಿಸಿದ ಪಡಿತರದಾರರು ಅಲ್ಲಿಗೆ ತೆರಳಿ ಪಡಿತರ ಪಡೆಯುವುದು ಕಷ್ಟಸಾಧ್ಯವಾಗಿದೆ.
ವಿತರಕರೊಂದಿಗೆ ವಾಗ್ವಾದ: ಪ್ರಸ್ತುತ ತಿಂಗಳ ತಮ್ಮ ಪಾಲಿನ ಪಡಿತರವನ್ನು ಬಯೋಮೆಟ್ರಿಕ್ ನೀಡಿ ಪಡೆದುಕೊಳ್ಳದಿದ್ದರೆ, ಮುಂದಿನ ತಿಂಗಳಿನ ಅಕ್ಕಿ ದೊರೆಯುವುದಿಲ್ಲ ಎನ್ನುವ ಆತಂಕದಿಂದ ದಿನನಿತ್ಯ ಕೂಲಿ-ನಾಲಿ ಮಾಡುವವರು ಕೆಲಸ ಬಿಡಬೇಕಾದ ಪ್ರಸಂಗವಿದೆ. ಎರಡ್ಮೂರು ದಿನ ಕೆಲಸ ಬಿಟ್ಟು ಹಗಲು-ರಾತ್ರಿ ಕಾಯುತ್ತಿದ್ದಾರೆ. ದಿನಪೂರ್ತಿ ಕಾದರೂ ಪಡಿತರ ಶೀಘ್ರ ದೊರೆಯದ ಕಾರಣ ಗ್ರಾಹಕರು ವಿತರಕರೊಂದಿಗೆ ವಾಗ್ವಾದಕ್ಕೀಳಿಯುವುದು ಸಾಮಾನ್ಯವಾಗಿದೆ.
ಮೈ ಕೊರೆಯುವ ಚಳಿಯಲ್ಲೂ ಕ್ಯೂ: ಹಗಲಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದ್ದು, ಪಡಿತರ ವಿತರಣೆ ಪೂರ್ಣ ಪ್ರಮಾಣದಲ್ಲಿ ಆಗುತ್ತಿಲ್ಲ. ಬೆಳ್ಳಂಬೆಳಗ್ಗೆ ಇಲ್ಲವೇ ರಾತ್ರಿ ವೇಳೆ ಕೊಂಚ ಸರ್ವರ್ ಸಿಗುತ್ತದೆ. ಹೀಗಾಗಿ ನ್ಯಾಯಬೆಲೆ ಅಂಗಡಿಯವರು ರಾತ್ರಿ ವೇಳೆಯಲ್ಲಿ ಪಡಿತರ ವಿತರಿಸಲು ಮುಂದಾಗಿದ್ದಾರೆ. ಆದರೆ, ಮೈ ಕೊರೆಯುವ ಚಳಿಯ ನಡುವೆ ವೃದ್ಧರು, ಮಹಿಳೆಯರು ಸರದಿಯಲ್ಲಿ ನಿಂತು ಅನ್ನಭಾಗ್ಯದ ಅಕ್ಕಿಯ ಪಡೆದುಕೊಳ್ಳುತ್ತಿರುವುದು ತಾಲೂಕಿನಲ್ಲಿ ಕಂಡುಬಂದಿದೆ.
ಸರ್ವರ್ ಕಾಟದಿಂದ ಫಲಾನುಭವಿಗಳಿಗೆ ಪಡಿತರ ಒದಗಿಸಲು ಸಮಸ್ಯೆಯಾಗುತ್ತಿದೆ. ರಾತ್ರಿ 11 ಗಂಟೆಯಾದರೂ ಪಡಿತರದಾರರ ವಾಗ್ವಾದದ ನಡುವೆಯೇ ಅವರಿಗೆ ಅನ್ನಭಾಗ್ಯದ ಅಕ್ಕಿ ಒದಗಿಸುವ ಕೆಲಸ ಮಾಡುತ್ತಿದ್ದೇವೆ.
ಈ ತಿಂಗಳು ಬಿಟ್ಟರೆ ಮುಂದಿನ ತಿಂಗಳು ಪಡಿತರ ಸಿಗಲ್ಲ ಎನ್ನುತ್ತಾರೆ. ಅದಕ್ಕಾಗಿ ಪಾಳೆ ನಿಲ್ಲುತ್ತೇವೆ. ಕಳೆದ ಮೂರ್ನಾಲ್ಕು ತಿಂಗಳಿಂದ ಇದೇ ಕತೆಯಾಗಿದೆ. ಅಕ್ಕಿ ಪಡೆಯಲು ರಾತ್ರಿ ಚಳಿಯಲ್ಲಿಯೂ ನಿಲ್ಲಬೇಕಾಗಿದೆ.
ಸರ್ವರ್ ಸಮಸ್ಯೆ ರಾಜ್ಯಾದ್ಯಂತ ಇದೆ. ಮೇಲಧಿಕಾರಿಗಳ ಗಮನಕ್ಕೂ ಇದ್ದು, ಮುಂದಿನ ತಿಂಗಳು ಸರಿಪಡಿಸುವ ಭರವಸೆ ನೀಡಿದ್ದಾರೆ. ಈ ಸಮಸ್ಯೆ ಮಧ್ಯೆಯೂ ತಾಲೂಕಿನಲ್ಲಿ ಪಡಿತರ ವಿತರಣೆ ನಡೆದಿದೆ.