ಗಂಗಾವತಿ ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯ ರೈತರ ಹೊಲಗಳಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯರು ಗಂಗಾವತಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಪದಾಧಿಕಾರಿಗಳಾದ ಯಮನೂರಪ್ಪ, ದುರುಗೇಶ, ಯಮುನಾ, ಶೋಭಾ ಇತರರಿದ್ದರು.
- ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಒತ್ತಾಯ
ಗಂಗಾವತಿ: ತಾಲೂಕಿನ ವೆಂಕಟಗಿರಿ ಹೋಬಳಿ ವ್ಯಾಪ್ತಿಯ ರೈತರ ಹೊಲಗಳಿಗೆ ರಸ್ತೆ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಸದಸ್ಯರು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಮತ್ತು ಕರ್ನಾಟಕ ಮಾದಿಗ ರಕ್ಷಣಾ ವೇದಿಕೆ ಸಹಯೋಗದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಯು.ವಸಂತಕುಮಾರ್‌ಗೆ ಮನವಿ ಸಲ್ಲಿಸಿದರು.
ವೇದಿಕೆ ರಾಜ್ಯಾಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ವೆಂಕಟಗಿರಿ ಹೋಬಳಿ ವ್ಯಾಪ್ತಿಯ ಆಗೋಲಿ ಗ್ರಾಮದ ರೈತರ ಹೊಲಗಳಿಗೆ ದಾರಿಯಿಲ್ಲದಂತಾಗಿದ್ದು, ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ. ನಮ್ಮ ಭೂಮಿ ನಮ್ಮ ಹಕ್ಕು, ನಮ್ಮ ದಾರಿ ನಮ್ಮ ಹಕ್ಕು ಯೋಜನೆಯಡಿ ರೈತರ ಹೊಲಗಳಿಗೆ ದಾರಿ ಕಲ್ಪಿಸಬೇಕೆಂಬ ನಿಯಮವಿದ್ದರೂ ಕಂದಾಯ ಅಧಿಕಾರಿಗಳು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕೃಷಿ ಚಟುವಟಿಕೆ ನಿಭಾಯಿಸಲು 16 ಅಡಿ ರಸ್ತೆಯ ಅಗತ್ಯವಿದ್ದು, ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ, ಸರ್ವೇ ಮೂಲಕ ಶಾಶ್ವತ ರಸ್ತೆ ಕಲ್ಪಿಸುವಂತೆ ಒತ್ತಾಯಿಸಿದರು.
ಪದಾಧಿಕಾರಿಗಳಾದ ಯಮನೂರಪ್ಪ, ದುರುಗೇಶ, ಸಿರಾಜ್, ಯಮುನಾ, ಶೋಭಾ, ಮುದುಕಪ್ಪ ಹೊಸ್ಮನಿ, ಶರಣಪ್ಪ, ಶಂಕ್ರಪ್ಪ, ಮುದುಕಪ್ಪ ಇತರರಿದ್ದರು.