ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ
- ಕುಡಾ ಅಕ್ರಮ ಹಗರಣ
- ಡಿಸಿಗೆ ದೂರು ಸಲ್ಲಿಕೆ
ಕೊಪ್ಪಳ: ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಹಣದ ಅವ್ಯವಹಾರ ಒಂದೆಡೆಯಾದರೆ, ಟೆಂಡರ್ ಕರೆಯದೇ ಗುತ್ತಿಗೆ ನೌಕರರನ್ನು ಮುಂದುವರೆಸಿರುವುದು ಬೆಳಕಿಗೆ ಬಂದಿದೆ. ವೇತನವಾಗಿ ಪಾವತಿಸಿದ 28 ಲಕ್ಷ ರೂ.ಗಳನ್ನು ವಾಪಸ್ ಪಡೆಯುವಂತೆ ಆಡಿಟ್ ವರದಿಯಲ್ಲಿ ಆಕ್ಷೇಪಣೆ ಸಲ್ಲಿಸಲಾಗಿದೆ.
8 ಕೋಟಿ ರೂ. ಅಕ್ರಮ ಪ್ರಕರಣದಲ್ಲಿ ಪ್ರಾಧಿಕಾರದಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ರವೀಂದ್ರ ಕುಮಾರ್ ಪ್ರಮುಖ ಆರೋಪಿ ಆಗಿದ್ದಾರೆ. ಕರ್ನಾಟಕ ಪಾರದರ್ಶಕ ಅಧಿನಿಯಮ ಅನುಸಾರ ಗುತ್ತಿಗೆ ನೌಕರರನ್ನು ಟೆಂಡರ್ ಕರೆದು ನೇಮಕ ಮಾಡಿಕೊಳ್ಳಬೇಕು. ಆದರೆ, ಈ ಮೊದಲು ಸೇವೆ ನೀಡಿದ ಬಸವೇಶ್ವರ ಎಂಟರ್ಪೆಸಸ್ಗೆ ಸೇವೆ ಮುಂದುವರೆಸಲಾಗಿದೆ. 28,69,575 ರೂ. ಪಾವತಿಸಲಾಗಿದೆ. ಈ ಬಗ್ಗೆ ಆಡಿಟ್ನಲ್ಲಿ ನೋಟಿಸ್ ನೀಡಿದ್ದರೂ ವಿವರಣೆ ನೀಡದ ಕಾರಣ ಆಕ್ಷೇಪಣೆ ಸಲ್ಲಿಸಲಾಗಿದೆ.
ಸರ್ಕಾರದಿಂದ ಮಂಜೂರಾದ ಹುದ್ದೆಗಳಿಗಿಂತ ಹೆಚ್ಚುವರಿ ನೌಕರರನ್ನು ನೇಮಿಸಿಕೊಂಡಿರುವುದು ಬೆಳಕಿಗೆ ಬಂದಿದೆ. 2025-26ನೇ ಸಾಲಿನಲ್ಲಿ ಕೇವಲ ಮೂರು ಹುದ್ದೆಗಳು ಮಂಜೂರಾಗಿವೆ. ಹೆಚ್ಚುವರಿಯಾಗಿ 4 ನೌಕರನ್ನು ನೇಮಿಸಿಕೊಂಡಿದ್ದು ಸರ್ಕಾರದಿಂದ ಅನುಮೋದನೆ ಪಡೆದುಕೊಂಡಿಲ್ಲ. ಗ್ರೂಪ್ ಡಿ-4, ತಲಾ ಒಂದೊಂದು ಡೆವರ್, ಕಂಪ್ಯೂಟರ್ ಆಪರೇಟರ್, ಕ್ಲೀನರ್ ಹುದ್ದೆಗಳಿಗೆ ವೇತನ ಪಾವತಿಸಲಾಗಿದೆ. ಹೊರಗುತ್ತಿಗೆ ನೌಕರರ ಸಂಬಳಕ್ಕಾಗಿ 27,45,876ರೂ. ವ್ಯಯಿಸಲಾಗಿದೆ. ಅದರಲ್ಲಿ ಮೂರು ಹುದ್ದೆಗಳಿಗೆ 8,19,624ರೂ. ಪಾವತಿಸಬೇಕಿದ್ದು, ಬಾಕಿ 19,26,252ರೂ. ವಸೂಲಿ ಮಾಡುವಂತೆ ಆಡಿಟ್ ವರದಿ ನೀಡಿದೆ.