ಕನಕಗಿರಿ ಕರ್ನಾಟಕ ಪಬ್ಲಿಕ್ ಶಾಲೆ ಪರೀಕ್ಷಾ ಕೇಂದ್ರದಲ್ಲಿ ಅರ್ಥಶಾಸ್ತ್ರ ವಿಷಯ ಪರೀಕ್ಷೆ ಬರೆದ ಒಬ್ಬ ವಿದ್ಯಾರ್ಥಿಗೆ 12ಜನ ಸಿಬ್ಬಂದಿ ಕಾರ್ಯನಿರ್ವಹಿಸಿದರು. ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಚಂದೂಸಾಬ್, ಸಿಬ್ಬಂದಿ ತಿಪ್ಪಣ್ಣ, ಸತೀಶ್, ಶಿವಪ್ಪ ಹೆಳವರ, ನಾರಾಯಣ ಇತರರಿದ್ದರು.
ಕನಕಗಿರಿ: ಇಲ್ಲಿನ ಕರ್ನಾಟಕ ಪಬ್ಲಿಕ್ ಶಾಲೆಯ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರ ಸಂಖ್ಯೆ 2ರಲ್ಲಿ ಬುಧವಾರ ನಡೆದ ಅರ್ಥಶಾಸ್ತ್ರ ವಿಷಯಕ್ಕೆ ಒಬ್ಬ ವಿದ್ಯಾರ್ಥಿ ಪರೀಕ್ಷೆ ಬರೆದಿದ್ದು, 12 ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ.
ವಿದ್ಯಾರ್ಥಿ ಕಾಂತೇಶ ಅರ್ಥಶಾಸ್ತ್ರ ಪರೀಕ್ಷೆ ಬರೆದ ಏಕೈಕ ವಿದ್ಯಾರ್ಥಿ. ವಿಶೇಷಚೇತನ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿಸಿ ಪರೀಕ್ಷೆಯಲ್ಲಿ ದ್ವಿತೀಯ ಭಾಷೆ ಇಂಗ್ಲಿಷ್ ಹಾಗೂ ತೃತೀಯ ಭಾಷೆ ಹಿಂದಿಗೆ ವಿನಾಯಿತಿ ಇದ್ದು, ಕೇವಲ ನಾಲ್ಕು ವಿಷಯಗಳಿಗೆ ಮಾತ್ರ ಪರೀಕ್ಷೆ ಬರೆಯಬೇಕಿದೆ. ಅದರಲ್ಲಿ ಸಾಮಾನ್ಯರಿಗಿರುವಂತೆ ಪ್ರಥಮ ಭಾಷೆ ಕನ್ನಡ ಹಾಗೂ ಸಮಾಜ ವಿಜ್ಞಾನ ವಿಷಯಗಳಿರುತ್ತವೆ. ಉಳಿದ ಗಣಿತ, ವಿಜ್ಞಾನದ ಬದಲಾಗಿ ಅರ್ಥಶಾಸ್ತ್ರ, ಸಮಾಜಶಾಸ್ತ್ರ ವಿಷಯಗಳಿರುತ್ತವೆ. ವಿಶೇಷ ಚೇತನರಿಗೆ ದೊರೆಯುವ ಅವಕಾಶವನ್ನು ಬಳಸಿಕೊಂಡ ವಿದ್ಯಾರ್ಥಿ ಕಾಂತೇಶನು ಬುಧವಾರ ಒಬ್ಬ ಸಹಾಯಾರ್ಥಿಯೊಂದಿಗೆ ಪರೀಕ್ಷೆ ಬರೆದನು.
ಕೇಂದ್ರದ ಮುಖ್ಯ ಅಧೀಕ್ಷಕ, ಸಹ ಅಧೀಕ್ಷಕ, ಪ್ರಶ್ನೆ ಪತ್ರಿಕೆ ಅಭಿರಕ್ಷಕ, ಮೊಬೈಲ್ ಸ್ವಾಧೀನಾಧಿಕಾರಿ, ಕೊಠಡಿ ಮೇಲ್ವಿಚಾರಕ, ರಿಲಿವರ್, ಪೊಲೀಸ್, ಅಟೆಂಡರ್, ವಾಟರ್‌ಮೆನ್, ಪ್ರಶ್ನೆ ಪತ್ರಿಕೆಗಳನ್ನು ಸರಬರಾಜಿನ ಮಾರ್ಗಾಧಿಕಾರಿಗಳು, ಚಾಲಕ ಹಾಗೂ ಭದ್ರತೆಗಾಗಿ ಪೊಲೀಸ್ ಸೇರಿ 12 ಜನ ಕೆಲಸ ಮಾಡಿದರು.
ನವಲಿಯಲ್ಲಿ ಇಬ್ಬರಿಗೆ 14 ಜನ ಸಿಬ್ಬಂದಿ: ನವಲಿ ಪರೀಕ್ಷಾ ಕೇಂದ್ರದಲ್ಲಿ ವಿದ್ಯಾರ್ಥಿಗಳಾದ ಪುನಿತ್‌ಕುಮಾರ್ ಹಾಗೂ ಕವಿತಾ ಅವರ ಬುಧವಾರ ಅರ್ಥಶಾಸ್ತ್ರ ಪರೀಕ್ಷೆ ಬರೆದಿದ್ದಾರೆ.
ಈ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕರು, ಸಹ ಅಧೀಕ್ಷಕರು, ಪ್ರಶ್ನೆ ಪತ್ರಿಕೆಗಳ ಅಭಿರಕ್ಷಕರು, ಮೊಬೈಲ್ ಸ್ವಾಧೀನಾಧಿಕಾರಿ, ಸಿಟ್ಟಿಂಗ್ ಸ್ಕ್ವಾಡ್, ಕೊಠಡಿ ಮೇಲ್ವಿಚಾರಕರು, ರಿಲಿವರ್, ಪೊಲೀಸ್, ಅಟೆಂಡರ್, ಡಿ ಗ್ರೂಪ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿ, ಮಾರ್ಗಾಧಿಕಾರಿಗಳು, ಚಾಲಕ ಹಾಗೂ ಭದ್ರತೆಗಾಗಿ ಪೊಲೀಸ್‌ರಂತೆ ಒಟ್ಟು 14 ಜನ ಕೆಲಸ ಮಾಡಿದ್ದಾರೆ.