- ಪಪಂ ಅಧ್ಯಕ್ಷ ರಮೇಶ ಹ್ಯಾಟಿ ಹೇಳಿಕೆ
ಕೊಪ್ಪಳ : ತಾಲೂಕಿನ ಭಾಗ್ಯನಗರದ ಶ್ರೀ ಶಂಕರಾಚಾರ್ಯ ಮಠದಲ್ಲಿ ವಿವಿಧ ದಾರ್ಮಿಕ ಕಾರ್ಯಕ್ರಮಗಳು, ಶ್ರೀ ಶಾರದಾಂಬಾ ಶಾಲೆ ಹಾಗೂ ವಿದ್ಯಾರ್ಥಿ ಮಂದಿರದ ನೂತನ ಕೊಠಡಿಗಳ ಅನಾವರಣ ಮತ್ತು ಜಗದ್ಗುರು ಶ್ರೀ ಶಂಕರಾಚಾರ್ಯ ಜಾತ್ರ ಮಹೋತ್ಸವ ಕಾರ್ಯಕ್ರಮವು ಏ.19ರಿಂದ 21 ರವರೆಗೆ ನಡೆಯಲಿದೆ ಎಂದು ಭಾಗ್ಯನಗರ ಪಪಂ ಅಧ್ಯಕ್ಷ ರಮೇಶ ಹ್ಯಾಟಿ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದರು.
ಏ. 19 ಬ್ರಾಹ್ಮೀ ಮುಹೂರ್ತದಲ್ಲಿ ಗುರುದೇವತಾ ಮೂರ್ತಿಗಳಿಗೆ ವಿಶೇಷ ಪಂಚಾಮೃತಾಭಿಷೇಕ, ಅಲಂಕಾರ ಪೂಜೆ ನಂತರ ಧ್ವಜಾರೋಹಣ, ಶ್ರೀ ಅಮ್ಮನವರಿಗೆ ಮತ್ತು ಮುತೆದೆಯರಿಗೆ ಉಡಿ ತುಂಬುವ ಕಾರ್ಯಕ್ರಮ. ಅಕ್ಷಯ ತೃತೀಯ ಏ. 20ರಂದು ಬೆಳಗ್ಗೆ 7ಕ್ಕೆ ನೂತನ ಶಿಲಾ ಮೂರ್ತಿಯನ್ನು ಶ್ರೀ ತಾಯಮ್ಮದೇವಿ ದೇವಸ್ಥಾನದಿಂದ ಶ್ರೀಮಠದವರೆಗೆ ಪೂರ್ಣಕುಂಭ ಕಳಸಗಳ ಸಮೇತ ಪಟ್ಟಣದ ಪ್ರಮುಖ ಬೀದಿಯಲ್ಲಿ ಮೆರವಣಿಗೆ. ಅಂದು ಸಂಜೆ 6 ರಿಂದ ಉಪಸ್ಥಿತ ಮಹಾತ್ಮರಿಂದ ಉಪದೇಶಾಮೃತ ನಂತರ ಮಹಾಪ್ರಸಾದ. ಮರುದಿನ ಏ. 21ರಂದು ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಶಾರದಾ ಮಾತೆಯ ನೂತನ ಮಂದಿರ ಉದ್ಘಾಟನೆ ಮತ್ತು ಡಾ. ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಗಳು, ಶ್ರೀ ಶಿವಕುಮಾರ ಮಹಾಸ್ವಾಮಿಗಳು ಹಾಗೂ ಉಪಸ್ಥಿತ ಸರ್ವಪೂಜ್ಯರ ಅಮೃತಾಸ್ತದಿಂದ, ಶಿಲಾ ಮೂರ್ತಿ ಪ್ರಾಣ ಪ್ರತಿಷ್ಠಾಪನೆ, ಗಣ್ಯರಿಂದ ಶ್ರೀ ಶಾರದಾಂಬಾ ಶಾಲಾ ಹಾಗೂ ವಿದ್ಯಾರ್ಥಿ ಮಂದಿರದ ನೂತನ ಕೊಠಡಿಗಳ ಅನಾವರಣಗೊಂಡು. ಅಂದು ಸಂಜೆ 6 ಗಂಟೆಗೆ ಜಗದ್ಗುರು ಶ್ರೀ ಶಂಕರಾಚಾರ್ಯರ ಮಹಾರಥೋತ್ಸವ ಜರುಗಲಿದೆ.
ತಂದೆ-&ತಾಯಿ ಇಲ್ಲದ ಅನಾಥ ಮಕ್ಕಳಿಗೆ 1ರಿಂದ 7ನೇ ತರಗತಿ ವರೆಗೆ ಊಟ ವಸತಿಯೊಂದಿಗೆ ಉಚಿತ ಶಿಕ್ಷಣವನ್ನು ಮಠದಿಂದ ನೀಡಲಾಗುತ್ತದೆ. ಅಂತವರು ಭಾಗ್ಯನಗರದಲ್ಲಿನ ಶ್ರೀ ಶಂಕರಾಚಾರ್ಯರ ಮಠಕ್ಕೆ ಬೇಟಿ ಮಾಡಬಹುದು ಎಂದು ತಿಳಿಸಿದ್ದಾರೆ.
ಶ್ರೀ ಶಾರದಾಂಬ ಮಹಿಳಾ ಅಭಿವೃದ್ಧಿ ಸಂಘದ ಅಧ್ಯಕ್ಷೆ ವನೀತಾ ಎಂ. ಕೋರಿ, ಸಂಘದ ಖಜಾಂಚಿ ಸರೋಜ ಭಾಕಳೆ, ಶಂಕರ ಯುವಕ ಸಂಘದ ಅಧ್ಯಕ್ಷ ಗಂಗಾಧರ ನೇವಾರ, ಸಹ ಕಾರ್ಯದರ್ಶಿ ಈರಣ್ಣ ಪಡಗಾಲ ಇದ್ದರು.