ಬಳಗೇರಿಯ ಶ್ರೀಮತಿ ಶಿವಮ್ಮ ಗಂ.ಬಸವರಡ್ಡಿ ರಡ್ಡೇರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಪ್ರೌಢ ಶಾಲೆಗಳ ವಲಯ ಮಟ್ಟದ ಕ್ರೀಡಾಕೂಟವನ್ನು ಬಿಇಒ ಶ್ರೀನಿವಾಸ ಬನ್ನಿಗೋಳ ಉದ್ಘಾಟಿಸಿದರು. ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಬೂದು, ಬಿಆರ್‌ಸಿ ಶರಣಗೌಡ ಪೊಲೀಸ್ ಪಾಟೀಲ್ ಇತರರಿದ್ದರು.
- ಬಿಇಒ ಶ್ರೀನಿವಾಸ ಬನ್ನಿಗೋಳ ಅಭಿಮತ
- ಕುಕನೂರು ಪ್ರೌಢ ಶಾಲೆಗಳ ವಲಯಮಟ್ಟದ ಕ್ರೀಡಾಕೂಟ
ಕುಕನೂರು: ವಿದ್ಯಾರ್ಥಿಗಳ ಸಮಗ್ರ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಗಳು ಸಹಕಾರಿಯಾಗಿವೆ. ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವುದರಿಂದ ದೈಹಿಕ, ಮಾನಸಿಕ ದೃಢತೆ, ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳು ಬೆಳೆಯುತ್ತವೆ ಎಂದು ಬಿಇಒ ಶ್ರೀನಿವಾಸ ಬನ್ನಿಗೋಳ ಹೇಳಿದರು.
ಬಳಗೇರಿ ಗ್ರಾಮದ ಶ್ರೀಮತಿ ಶಿವಮ್ಮ ಗಂ.ಬಸವರಡ್ಡಿ ರಡ್ಡೇರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಪಂ., ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತಾಪಂನಿಂದ ಆಯೋಜಿಸಿದ ಕುಕನೂರು ಪೂರ್ವ ಪ್ರೌಢ ಶಾಲೆಗಳ ವಲಯಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಸೋಲು-ಗೆಲುವು ಸಮಾನ ಮನೋಭಾವದಿಂದ ಸ್ವೀಕರಿಸುವ ಗುಣವನ್ನು ಕ್ರೀಡೆಗಳು ಬೆಳೆಸುತ್ತವೆ. ಗ್ರಾಮೀಣ ಭಾಗದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಲು ವಲಯ ಮಟ್ಟದ ಕ್ರೀಡಾಕೂಟಗಳು ಭದ್ರ ಬುನಾದಿಯಾಗುತ್ತವೆ. ವಿದ್ಯಾರ್ಥಿಗಳು ಕ್ರೀಡಾ ಸ್ಫೂರ್ತಿಯಿಂದ ಸ್ಪರ್ಧೆಗಳಲ್ಲಿ ಭಾಗವಹಿಸಿ ಶಾಲೆ ಹಾಗೂ ವಲಯದ ಕೀರ್ತಿಯನ್ನು ಹೆಚ್ಚಿಸಬೇಕು ಎಂದರು.
ತಾಲೂಕು ಪ್ರಭಾರ ದೈಹಿಕ ಶಿಕ್ಷಣಾಧಿಕಾರಿ ಶರಣಪ್ಪ ವೀರಾಪುರ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾ ಮನೋಭಾವ, ಶಿಸ್ತು, ಸಮಯಪ್ರಜ್ಞೆ, ನಾಯಕತ್ವ ಹಾಗೂ ತಂಡದ ಸಹಕಾರದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಲಾಗಿದೆ ಎಂದರು.
ಶಾಲೆಯ ಹಳೇ ವಿದ್ಯಾರ್ಥಿಗಳಿಂದ ಊಟದ ವ್ಯವಸ್ಥೆ ಕಲ್ಪಿಸಲಾಗಿತ್ತು. ಎಸ್ಡಿಎಂಸಿ ಅಧ್ಯಕ್ಷ ಶರಣಪ್ಪ ಬೂದು, ಮುಖ್ಯಶಿಕ್ಷಕಿ ಅಕ್ಕಮಹಾದೇವಿ ಜಿ.ಎನ್.ಮಠ, ಬಿಆರ್‌ಸಿ ಶರಣಗೌಡ ಪೊಲೀಸ್ ಪಾಟೀಲ್, ನಿವೃತ್ತ ಮುಖ್ಯಶಿಕ್ಷಕ ವೀರಭದ್ರಪ್ಪ ಎಸ್.ಬೆಣಕಲ್, ಸನೌ ಸಂಘದ ತಾಲೂಕು ಅಧ್ಯಕ್ಷ ಮಹೇಶ ಶಬರದ, ಶಿಕ್ಷಕರಾದ ತಿಪ್ಪಣ್ಣ ಛಲವಾದಿ, ಬಸಪ್ಪ ತಳವಾರ, ಬಸಪ್ಪ ಭಜಂತ್ರಿ, ಶರಣಪ್ಪ ಚಾಕ್ರಿ, ಬಸವರಾಜ ಮೇಟಿ, ಸುರೇಶ ಅಬ್ಬಿಗೇರಿ, ಶಿವಾನಂದ, ಉಮೇಶ ಕಂಬಳಿ, ಕಳಕರೆಡ್ಡಿ ರೆಡ್ಡರ ಇತರರಿದ್ದರು.