ವಡ್ಡರಹಟ್ಟಿಯ ಕೆಎಲ್‌ಇ ಪಿಯು ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮವನ್ನು ಕಲಬುರಗಿಯ ನಿವೃತ್ತ ಬಿಇಒ ಜಿ.ಎಂ.ವಿಜಯಕುಮಾರ ಉದ್ಘಾಟಿಸಿದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗಿರಿಯಪ್ಪ ಹೊಸ್ಕೇರಿ, ಪ್ರಾಚಾರ್ಯೆ ಡಾ.ಡಿ.ಎ.ಮಾನಸಾ ಇತರರಿದ್ದರು.
- ಕಲಬುರಗಿಯ ನಿವೃತ್ತ ಬಿಇಒ ಜಿ.ಎಂ. ವಿಜಯಕುಮಾರ ಹೇಳಿಕೆ
ಗಂಗಾವತಿ: ವಿದ್ಯಾರ್ಥಿಗಳು ಅಧ್ಯಯನ ಮತ್ತು ಏಕಾಗ್ರತೆಯೊಂದಿಗೆ ಕ್ರಿಯಾಶೀಲತೆ ರೂಢಿಸಿಕೊಂಡಾಗ ಮಾತ್ರ ನಿರೀಕ್ಷಿತ ಲಿತಾಂಶ ಪಡೆಯಲು ಸಾಧ್ಯ ಎಂದು ಕಲಬುರಗಿಯ ನಿವೃತ್ತ ಬಿಇಒ ಜಿ.ಎಂ. ವಿಜಯಕುಮಾರ ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ ಕೆಎಲ್‌ಇ ಪಿಯು ಕಾಲೇಜಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪ್ರಸಕ್ತ ಸಾಲಿನ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆ ಉದ್ಘಾಟಿಸಿ ಮಾತನಾಡಿದರು. ಸಮಯ ಪ್ರಜ್ಞೆ ಮುಖ್ಯವಾಗಿದ್ದು, ಅಧ್ಯಯನ ಜತೆಗೆ ಇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಬೇಕು. ಸಾಧನೆಗೆ ಆಸಕ್ತಿ ಮುಖ್ಯವಾಗಿದ್ದು, ಕಲಿಸಿದ ಗುರುಗಳಿಗೆ ವಿಧೇಯರಾಗಿರುವಂತೆ ಸಲಹೆ ನೀಡಿದರು.
ಮಾಜಿ ಶಾಸಕ ಪರಣ್ಣ ಮುನವಳ್ಳಿ ಮಾತನಾಡಿ, ಪದ್ಮಶ್ರೀ ಡಾ.ಪ್ರಭಾಕರ ಕೋರೆ ದೂರದೃಷ್ಟಿ ಲದಿಂದ ಕೆಎಲ್‌ಇ ಸಂಸ್ಥೆ ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯಮಟ್ಟದಲ್ಲಿ ಹೆಸರು ಮಾಡಿದೆ ಎಂದರು.
ಪ್ರಾಚಾರ್ಯೆ ಡಾ.ಡಿ.ಎ.ಮಾನಸಾ ಪ್ರಾಸ್ತಾವಿಕ ನುಡಿಗಳನ್ನಾಡಿದರು. 2025-26ನೇ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಸ್ಥಾನಿಕ ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಗಿರಿಯಪ್ಪ ಹೊಸ್ಕೇರಿ, ಉಪನ್ಯಾಸಕರು ಮತ್ತು ಸಿಬ್ಬಂದಿ ಇದ್ದರು.