ಮಕರ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶ್ರೀ ಹುಲಿಗೆಮ್ಮ ದೇವಿ ವಿಶೇ?ವಾಗಿ ಅಲಂಕರಿಸಿದ್ದರು.
ಮುನಿರಾಬಾದ್: ಮಕರ ಸಂಕ್ರಾಂತಿ ಪ್ರಯುಕ್ತ ಸಮೀಪದ ಹುಲಿಗಿಯ ಹುಲಿಗೆಮ್ಮ ದೇವಿ ದರ್ಶನವನ್ನು ಅಪಾರ ಭಕ್ತರು ಪಡೆದುಕೊಂಡರು.
ಬೆಳಗ್ಗೆ ಜಗನ್ಮಾತೆ ಹುಲಿಗೆಮ್ಮ ದೇವಿಗೆ ಅಲಂಕಾರದೊಂದಿಗೆ ವಿಶೇಷ ಪೂಜೆ ನೆರವೇರಿತು. ಬೆಳಿಗ್ಗೆಯಿಂದ ದೇವಸ್ಥಾನಕ್ಕೆ ಲಕ್ಷಕ್ಕೂ ಅಧಿಕ ಭಕ್ತರು ಆಗಮಿಸಿ ತುಂಗಭದ್ರಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದರು. ಶ್ರೀದೇವಿಗೆ ವಿಶೇಷವಾಗಿ ಹೂ ಹಣ್ಣುಗಳನ್ನು ದೇವಿಗೆ ಸಮರ್ಪಿಸಿ ಪೂಜೆ ಸಲ್ಲಿಸಿದರು.
ಕೊಪ್ಪಳ, ಗಂಗಾವತಿ, ಹೊಸಪೇಟೆ ಮಾರ್ಗವಾಗಿ ಅಪಾರ ಸಂಖ್ಯೆಯಲ್ಲಿ ಭಕ್ತರು ಹುಲಿಗಿಗೆ ಆಗಮಿಸಿದ್ದರು. ಉರಿಬಿಸಿಲು ಲೆಕ್ಕಿಸದೇ ಹಲವು ತಾಸು ಭಕ್ತರು ಸರತಿಯಲ್ಲಿ ನಿಂತಿ ದರ್ಶನ ಪಡೆದುಕೊಂಡರು. ದೇವಿಗೆ ಕಾಯಿ-ಕರ್ಪೂರ ಅರ್ಪಿಸಿ ಭಕ್ತಿ ಸಮರ್ಪಿಸಿದರು. ಸಂಜೆಯಾದರೂ ಸಹ ಭಕ್ತರ ಸಂಖ್ಯೆ ಹೆಚ್ಚುತ್ತಲೇ ಇತ್ತು. ಸಂಕ್ರಮಣ ಪ್ರಯುಕ್ತ ದೇವಸ್ಥಾನದ ಮುಂಭಾಗ ಬೃಹದಾಕಾರ ರಂಗೋಲಿ ಹಾಕಲಾಗಿತ್ತು. ದೇವಸ್ಥಾನ, ಸುತ್ತಮುತ್ತಲಿನ ಪ್ರದೇಶದಲ್ಲಿ ತಳಿರು-ತೋರಣಗಳಿಂದ ಸಿಂಗರಿಸಲಾಗಿತ್ತು.
ಬೆಳಗ್ಗೆಯೇ ದೇವಸ್ಥಾನ ಆವರಣ ಹಾಗೂ ದೇವಸ್ಥಾನದ ರಾಜಬೀದಿ ಭಕ್ತರಿಂದ ತುಂಬಿತ್ತು. ಸಂಕ್ರಮಣ ದಿನದಂದು ಭಕ್ತರು ಬುತ್ತಿ ಕಟ್ಟಿಕೊಂಡು ಬಂದು ಅಮ್ಮನವರ ದರ್ಶನ ಪಡೆದ ನಂತರ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ಕುಳಿತು ತಾವು ತಂದ ಬುತ್ತಿಯನ್ನು ಸೇವಿಸಿ, ಊರುಗಳತ್ತ ಪ್ರಯಾಣ ಬೆಳೆಸಿದರು.