ಹಟ್ಟಿ ಗ್ರಾಮದಲ್ಲಿ ಜಾತ್ರೋತ್ಸವ ನಿಮಿತ್ತ ಶ್ರೀ ದುರ್ಗಾಂಬೆ ದೇವಿ, ಶ್ರೀ ಲಕ್ಕಾಂಬೆ ದೇವಿಗೆ ವಿಶೇಷ ಅಲಂಕಾರ ಮಾಡಿರುವುದು. 
ಕೊಪ್ಪಳ

ಶ್ರೀ ದುರ್ಗಾಂಬೆ, ಲಕ್ಕಾಂಬೆಗೆ ವಿಶೇಷ ಪೂಜೆ

ಪ್ರಮುಖ ಮುಖ್ಯಾಂಶಗಳು

  • ಜಾತ್ರೋತ್ಸವ
  • ದುರ್ಗಾಂಬೆ

ಶ್ರೀ ದುರ್ಗಾಂಬೆ, ಲಕ್ಕಾಂಬೆಗೆ ವಿಶೇಷ ಪೂಜೆ

ಅಳವಂಡಿ: ಸಮೀಪದ ಹಟ್ಟಿ ಗ್ರಾಮದಲ್ಲಿ ಶ್ರೀ ದುರ್ಗಾಂಬೆ ಹಾಗೂ ಲಕ್ಕಾಂಬೆ ದೇವಿ ಜಾತ್ರೋತ್ಸವ ನಿಮಿತ್ತ ಮಂಗಳವಾರ ಭಕ್ತರಿಂದ ವಿಶೇಷ ಪೂಜೆ, ನೈವೇದ್ಯ ಹಾಗೂ ಉಡಿ ತುಂಬುವ ಕಾರ್ಯಕ್ರಮ ನೆರವೇರಿತು.
ಜಾತ್ರೆ ನಿಮಿತ್ತ ದೇವಸ್ಥಾನವನ್ನು ಬಣ್ಣ ಬಳಿದು, ಹೂ, ವಿದ್ಯುತ್ ದೀಪಗಳು, ತಳಿರುತೋರಣದಿಂದ ಅಲಂಕರಿಸಲಾಗಿತ್ತು. ಬೆಳಗ್ಗೆ ದೇವತೆಯರಿಗೆ ಭಕ್ತರು ಮಡಿ ಉಡಿಯಿಂದ ನೈವೇದ್ಯ, ಉಡಿ, ಕಾಯಿ, ಕರ್ಪೂರ, ಹೂಗಳೊಂದಿಗೆ ಪೂಜೆ ಸಲ್ಲಿಸಿ ಹರಕೆ ತೀರಿಸಿದರು. ಕೆಲವರು ಜನಪದ ವಾದ್ಯ ಮೇಳದೊಂದಿಗೆ ದೀರ್ಘದಂಡ ನಮಸ್ಕಾರ ಹಾಕಿ ಭಕ್ತಿ ಅರ್ಪಿಸಿದರು.
ಈ ಭಾಗದಲ್ಲಿ ಪ್ರಸಿದ್ಧಿ ಪಡೆದ ಶಕ್ತಿ ದೇವತೆಗಳಾದ ಶ್ರೀ ದುರ್ಗಾಂಬೆ ಹಾಗೂ ಲಕ್ಕಾಂಬೆಯ ಜಾತ್ರೋತ್ಸವ ಜ.9ರವರೆಗೆ ಅದ್ದೂರಿಯಾಗಿ ನಡೆಯಲಿದೆ. ಪಿಎಸ್‌ಐ ಪ್ರಹ್ಲಾದ ನಾಯಕ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ.
ಬುಧವಾರ ಶ್ರೀದೇವಿಯರ ಗಂಗಾದರ್ಶನ ಹಾಗೂ ಜನಪದ ವಾದ್ಯಮೇಳದೊಂದಿಗೆ ಅಡ್ಡಪಲ್ಲಕ್ಕಿ ಮೆರವಣಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಲಿದೆ. ನಂತರ ಅನ್ನಸಂತರ್ಪಣೆ, ರಾತ್ರಿ ನಾಟಕ ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.