ಗಂಗಾವತಿ ಜುಲಾಯಿನಗರದಲ್ಲಿ ದಾಖಲೆಗಳಿಲ್ಲದೇ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಮಿನಿ ಲಾರಿಯನ್ನು ಹಿಂದುಪರ ಸಂಘಟನೆ ಕಾರ್ಯಕರ್ತರು ತಡೆ ಹಿಡಿದು ಪೊಲೀಸ್ ಠಾಣೆಗೆ ಒಪ್ಪಿಸಿದರು.
ಗಂಗಾವತಿ: ದಾಖಲೆಗಳಿಲ್ಲದೆ ಜಾನುವಾರುಗಳನ್ನು ಸಾಗಣೆ ಮಾಡುತ್ತಿದ್ದ ಮಿನಿ ಲಾರಿಯನ್ನು ಹಿಂದುಪರ ಸಂಘಟನೆ ಕಾರ್ಯಕರ್ತರು ನಗರದ ಜುಲಾಯಿನಗರದಲ್ಲಿ ತಡೆ ಹಿಡಿದು ನಗರ ಪೊಲೀಸ್ ಠಾಣೆಗೆ ಶುಕ್ರವಾರ ಒಪ್ಪಿಸಿದ್ದಾರೆ.
ತಾಲೂಕಿನ ಓಬಳಬಂಡಿಗೆ ಸೇರಿದ ಮಿನಿಲಾರಿಯಲ್ಲಿ 6 ಜಾನುವಾರುಗಳಿದ್ದು, ಗಿಣಿಗೇರಾದಿಂದ ಕಂಪ್ಲಿಗೆ ಕೊಂಡೊಯ್ಯುತ್ತಿದ್ದರು. ಅನುಮಾನಗೊಂಡ ಹಿಂದುಪರ ಸಂಘಟನೆ ಮುಖ್ಯಸ್ಥ ಶ್ರೀಕಾಂತ ಹೊಸ್ಕೇರಾ ನೇತೃತ್ವದ ತಂಡ ಲಾರಿಯನ್ನು ತಡೆದು ವಿಚಾರಿಸಿದಾಗ ಲಾರಿ ಚಾಲಕ ಬಸವರಾಜ ಸರಿಯಾಗಿ ಸ್ಪಂದಿಸಲಿಲ್ಲ. ಸ್ಥಳಕ್ಕೆ ನಗರ ಠಾಣೆ ಪಿಐ ಪ್ರಕಾಶ ಆರ್ ಯಾತನೂರ್ ಆಗಮಿಸಿ ಪರಿಶೀಲಿಸಿದರು.
ಸಾಗಣೆಗೆ ಸಂಬಂಧಿಸಿದ ಎಪಿಎಂಸಿ ಮತ್ತು ಪಶುಸಂಗೋಪನೆ ಇಲಾಖೆ ಯಾವುದೇ ದಾಖಲೆಗಳಿರಲಿಲ್ಲ. ಚಾಲಕ ಬಸವರಾಜ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಜಾನುವಾರುಗಳನ್ನು ನಗರದ ಗಣೇಶ ನಗರದ ಗೋಶಾಲೆಗೆ ರವಾನಿಸಲಾಗಿದೆ. ಬಕ್ರೀದ್ ಹಿನ್ನೆಲೆ ವಧೆ ಮಾಡಲು ಜಾನುವಾರುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದರು ಎಂದು ಸಂಘಟನೆ ಸದಸ್ಯರು ಆರೋಪಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.