ಕೊಪ್ಪಳದಲ್ಲಿ ಗುರುವಾರ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಧ್ಯಕ್ಷತೆಯಲ್ಲಿ ಎಸ್ಐಆರ್ ಸಭೆ ನಡೆಯಿತು. ಚುಣಾವಣೆ ಶಾಖೆ ತಹಸೀಲ್ದಾರ್ ರವಿ ವಸ್ತ್ರದ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸುನಿಲ್ ಹೆಸರೂರು, ಕೃಷ್ಣಾ ಇಟ್ಟಂಗಿ, ಸೋಮನಗೌಡ, ಮೆಹಬೂಬ್ ಪಾಷಾ ಇದ್ದರು.
- ಡಿಸಿ ಡಾ.ಸುರೇಶ ಬಿ.ಇಟ್ನಾಳ ಮಾಹಿತಿ
- ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಸಭೆ
ಕೊಪ್ಪಳ : ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿ ಮರು ನಿಗದಿಯಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಲ ಮಾಹಿತಿ ನೀಡಿದರು.
ನಗರದ ಜಿಲ್ಲಾಡಳಿತ ಭವನದ ಕೆಸ್ವಾನ್-2 ಸಭಾಂಗಣದಲ್ಲಿ ಗುರುವಾರ ರಾಜಕೀಯ ಪಕ್ಷಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಮಾತನಾಡಿದರು.
ಬಿಎಲ್ಒಗಳ ಮನೆ ಭೇಟಿಯನ್ನು ಆಗಸ್ಟ್ 8ವರೆಗೆ ವಿಸ್ತರಿಸಲಾಗಿದೆ. ಆ.17ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಆ.17ರಿಂದ ಸೆ.16ವರೆಗೆ ಹಕ್ಕು, ಆಕ್ಷೇಪಣೆ ಸಲ್ಲಿಕೆಗೆ ಅವಕಾಶವಿರಲಿದೆ. ಆ.17ರಿಂದ ಅಕ್ಟೋಬರ್ 15ವರೆಗೆ ನೋಟಿಸ್ ಅವಧಿ, ಹಕ್ಕು, ಆಕ್ಷೇಪಣೆ ವಿಲೇವಾರಿ ನಡೆಯುವುದು. ಅಕ್ಟೋಬರ್ 19ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ 11,90,214 ಮತದಾರರಿದ್ದಾರೆ. ಜು.16ರ ಅಂತ್ಯಕ್ಕೆ 7,69,695 ಗಣತಿ ನಮೂನೆಗಳು ಡಿಜಿಟಲೀಕರಣಗೊಡಿವೆ. ಕನಕಗಿರಿ ಕ್ಷೇತ್ರದಲ್ಲಿ ಶೇ.70.49ರಷ್ಟಾಗಿದ್ದು ಮೊದಲ ಸ್ಥಾನದಲ್ಲಿದೆ. ಯಲಬುರ್ಗಾ ಶೇ.66.03, ಗಂಗಾವತಿ ಶೇ.63.06, ಕುಷ್ಟಗಿ ಶೇ.61.58, ಕೊಪ್ಪಳ ಶೇ.59.88ರಷ್ಟು ಪ್ರಗತಿಯಾಗಿದೆ ಎಂದು ವಿವರಿಸಿದರು.
ಪ್ರೊಜಿನಿ ಮ್ಯಾಪಿಂಗ್, ಆನ್ಲೈನ್ ಮೂಲಕ ಬಂದ 475 ಅರ್ಜಿಗಳ ಪರಿಶೀಲನೆ ಬಾಕಿಯಿದೆ. ಈವರೆಗೆ 1,426 ಗೈರು, 13,068 ಕಾಯಂ ಸ್ಥಳಾಂತರ, 9,333 ಮೃತರು, 5,131 ಡುಪ್ಲಿಕೇಟ್ ಮತದಾರ ಚೀಟಿ ಪತ್ತೆಯಾಗಿವೆ. ಬಿಎಲ್ಒಗಳ ಸಭೆ ನಡೆಸಿದ್ದು, ಚುನಾವಣಾಧಿಕಾರಿಗಳಿಗೆ ಮಾಹಿತಿ ಒದಗಿಸಿದ್ದಾಗಿ ತಿಳಿಸಿದರು.
ಚುಣಾವಣೆ ಶಾಖೆ ತಹಸೀಲ್ದಾರ್ ರವಿ ವಸ್ತ್ರದ್, ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಸುನಿಲ್ ಹೆಸರೂರು, ಕೃಷ್ಣಾ ಇಟ್ಟಂಗಿ, ಸೋಮನಗೌಡ, ಮೆಹಬೂಬ್ ಪಾಷಾ ಇತರರಿದ್ದರು.