ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್ಐಆರ್ ಅವದಿ ಮುಂದುಡಿಕೆ ಕುರಿತು ಕರೆದ ಸುದ್ದಿಗೋಷ್ಠಿಯಲ್ಲಿ ಡಿಸಿ ಡಾ. ಸುರೇಶ ಬಿ. ಇಟ್ನಾಳ ಮಾತನಾಡಿದರು. ಎಡಿಸಿ ಸಿದ್ರಾಮೇಶ್ವರ ಇದ್ದರು.
- ಡಿಸಿ ಡಾ. ಸುರೇಶ ಇಟ್ನಾಳ ಸೂಚನೆ
- ನಮೂನೆ ಭರ್ತಿಗೆ ಆ.17ರವೆಗೆ ಅವಕಾಶ
ಕೊಪ್ಪಳ : ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ವೇಳಾಪಟ್ಟಿಯನ್ನು ಭಾರತ ಚುನಾವಣಾ ಆಯೋಗವು ಪರಿಷ್ಕರಿಸಿ ಮರು ನಿಗದಿಪಡಿಸಿದ್ದು, ಗಣತಿ ನಮೂನೆ ಭರ್ತಿಗೆ ಆಗಸ್ಟ್ 17ರವರೆಗೆ ಅವಕಾಶವಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ, ಡಿಸಿ ಡಾ. ಸುರೇಶ ಬಿ. ಇಟ್ನಾಳ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಎಸ್ಐಆರ್ ಅವದಿ ಮುಂದುಡಿಕೆ ಕುರಿತು ಮಾಹಿತಿ ನೀಡಲು ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.
ಮರುನಿಗದಿತ ಪರಿಷ್ಕರಣೆ ವೇಳಾಪಟ್ಟಿಯಂತೆ ಬಿಎಲ್ಒ.ಗಳಿಂದ ಮನೆ ಮನೆ ಭೇಟಿ ಮತ್ತು ಮತಗಟ್ಟೆಗಳ ಪರಿಷ್ಕರಣೆ ಮಾಡುವರು. ಆ. 24ರಂದು ಕರಡು ಮತದಾರರ ಪಟ್ಟಿ ಪ್ರಕಟಣೆ. ಆ. 24 ರಿಂದ ಸೆಪ್ಟೆಂಬರ್ 23ರವರೆಗೆ ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ. ಆ. 24 ರಿಂದ ಅಕ್ಟೋಬರ್ 22ರವರೆಗೆ ನೋಟಿಸ್ ಅವಧಿ ಮತ್ತು ಹಕ್ಕು-&ಆಕ್ಷೇಪಣೆ ವಿಲೇವಾರಿ ನಡೆಯಲಿದೆ. ಅಕ್ಟೋಬರ್ 27ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಣೆಯಾಗುವುದು. ಜಿಲ್ಲೆಯ ನಾಗರಿಕರು ಹಾಗೂ ಮತದಾರರು ಈ ನಿಗದಿತ ಅವಧಿಯಲ್ಲಿ ತಮ್ಮ ಹೆಸರನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿದರು.
ಬಿಎಲ್ಒಗಳು ಮನೆ ಭೇಟಿ ಸಂದರ್ಭದಲ್ಲಿ ಸಿಗದ ಮತದಾರರನ್ನು ಅಬ್ಸೆಂಟ್, ಶಿಫ್ಟೆಡ್, ಡೆಡ್, ಡುಪ್ಲಿಕೇಟ್, ಇತರ ಎಂದು ಗುರುತಿಸಲಾದ ಒಟ್ಟು 1,49,168 ಮತದಾರರ ಪಟ್ಟಿಯನ್ನು ಜಿಲ್ಲಾ ವೆನ್ಸೈಟ್ನಲ್ಲಿ ಪ್ರಚುರಪಡಿಸಲಾಗಿರುತ್ತದೆ ಹಾಗೂ ಪ್ರತಿ ವಿಧಾನಸಭಾ ಕ್ಷೇತ್ರದ ಮತಗಟ್ಟೆವಾರು ಮತದಾರರ ವಿವರವನ್ನು ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ನೀಡುವುದು. ಜುಲೈ 26ರಿಂದ ಇಲ್ಲಿಯವರೆಗೆ ಎಎಸ್ಡಿಡಿಒ ಎಂದು ಗುರುತು ಮಾಡಲಾದ ಮತದಾರರುಗಳ ಪೈಕಿ ಒಟ್ಟು 10,958 ಮತದಾರರ ಗಣತಿ ನಮೂನೆಗಳನ್ನು ಮತದಾರರ ನೋಂದಣಾಧಿಕಾರಿಗಳು ರೋಲ್ ಬ್ಯಾಕ್ ಮಾಡಿದ್ದು, ಈ ಕಾರ್ಯವು ಆಗಸ್ಟ್ 17 ರವರೆಗೆ ನಡೆಯಲಿದೆ. ಅರ್ಹ ಮತದಾರರ ಗಣತಿ ನಮೂನೆ ಡಿಜಿಟಲೀಕರಣ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮತದಾರರ ಪಟ್ಟಿಯಲ್ಲಿ ಹೆಸರಿದ್ದು, ಅಬ್ಸೆಂಟ್ ಅಥವಾ ಶಿಫ್ಟೆಡ್ ಪಟ್ಟಿಯಲ್ಲಿ ಹೆಸರು ಬಂದಿರುವವರು, ಆಯಾ ತಾಲೂಕು ತಹಶಿಲ್ದಾರರು, ಮತದಾರರ ನೋಂದಣಾಧಿಕಾರಿ ಅಥವಾ ಜಿಲ್ಲಾಧಿಕಾರಿ ಕಚೇರಿಗೆ ಸಂಪರ್ಕಿಸಿ ನಮೂನೆ ಭರ್ತಿ ಮಾಡಿ ನೀಡಲು ಅವಕಾಶವಿದೆ. ಅಲ್ಲದೇ ಅಕ್ಟೋಬರ್ ವೇಳೆಗೆ 18 ವರ್ಷ ತುಂಬುವ ಯುವಕ-ಯುವತಿಯರು ಹಾಗೂ ಮತದಾರರ ಪಟ್ಟಿಯಿಂದ ಹೊರಗುಳಿದವರು ನಮೂನೆ 6 ಸಲ್ಲಿಸಿ ಹೆಸರು ಸೇರಿಸಲು ವಿಶೇಷ ನೋಂದಣಿ ಅಭಿಯಾನ ಮತ್ತು ಕ್ಯಾಂಪ್ಗಳನ್ನು ಆಯೋಜಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಡಿಸಿ ಕಚೇರಿ ಚುನಾವಣಾ ತಹಶಿಲ್ದಾರ ರವಿ ವಸ್ತ್ರದ್ ಇದ್ದರು.