ಯಲಬುರ್ಗಾದಲ್ಲಿ ಬಸವ ಶಿವಯೋಗ ಸಮಿತಿ ಆಯೋಜಿಸಿದ್ದ 11ನೇ ಶಿವಾನುಭವ ಗೋಷ್ಠಿಯಲ್ಲಿ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರ.ಕು. ಗೀತಕ್ಕ ಮಾತನಾಡಿದರು. ಸಮಿತಿ ಅಧ್ಯಕ್ಷ ಸಂಗಣ್ಣ ಟೆಂಗಿನಕಾಯಿ, ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರಗೌಡ ಉಳ್ಳಾಗಡ್ದಿ, ಬಸವರಾಜ ಗುಳಗುಳಿ, ತಾಲೂಕು ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ ಇತರರಿದ್ದರು. 
ಕೊಪ್ಪಳ

ಮನಪರಿವರ್ತನೆಯಿಂದ ಸಮಾಜ ಶುದ್ಧೀಕರಣ

ಕುರುವತ್ತಿ ಶ್ರೀಕಾಂತಪ್ಪ
ಯಲಬುರ್ಗಾ: ಜಾತಿ, ಭಾಷೆ ಮತ್ತು ಧರ್ಮ ಮೀರಿ ನೈತಿಕ ಮೌಲ್ಯಗಳನ್ನು ಬೆಳೆಸಿಕೊಂಡು ಮನಪರಿವರ್ತನೆಗೊಂಡಲ್ಲಿ ಸಮಾಜವನ್ನೇ ಶುದ್ಧೀಕರಿಸಬಹುದೆಂದು ಪಟ್ಟಣದ ಈಶ್ವರೀಯ ವಿಶ್ವ ವಿದ್ಯಾಲಯದ ಸಂಚಾಲಕಿ ಬ್ರ.ಕು. ಗೀತಕ್ಕ ಅಭಿಪ್ರಾಯಪಟ್ಟರು.
ಪಟ್ಟಣದ ಸಾಯಿ ಪ್ಯಾಲೇಸ್‌ನಲ್ಲಿ ಗುರವಾರ ರಾತ್ರಿ ಬಸವ ಶಿವಯೋಗ ಸಮಿತಿಯಿಂದ ಆಯೋಜಿಸಿದ್ದ 11ನೇ ಶಿವಾನುಭವ ಗೋಷ್ಠಿಯಲ್ಲಿ ಮಾತನಾಡಿದರು. ಬಸವಾದಿ ಶರಣರು, ಹರಿಶ್ಚಂದ್ರ, ಸ್ವಾಮಿವಿವೇಕಾನಂದ ಮತ್ತು ಗಾಂಧೀಜಿರವರು ನೆಲೆಸಿದ ಈ ನಾಡು ಶಾಂತಿಯ ಬೀಡಾಗಿದೆ. ಮಾನವೀಯ ಮೌಲ್ಯಗಳಿಗೆ ಬೆಲೆ ನೀಡುವ ಸಂತ-ಶರಣರು ಕಾಯಕದ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದರು. ಅನ್ಯರ ಹಂಗಿನಲ್ಲಿ ಬಾಳಲಾರದೆ ಸ್ವಾವಲಂಬಿ ಜೀವನ ನಡೆಸುತ್ತಿದ್ದರು. ಪರ ಧನ ಬೇರೆಯವರ ವಸ್ತುವಿಗೆ ಆಸೆ ಪಡೆದ ಕಾರಣ ಅವರ ಬಾಳು ಬಂಗಾರವಾಗಿತ್ತು ಎಂದರು.
ಕಿತ್ತೂರು ಚನ್ನಮ್ಮ ವಸತಿ ನಿಲಯ ಶಾಲೆ ಪ್ರಾಚಾರ್ಯ ವಿರೂಪಾಕ್ಷಪ್ಪ ಹನುಮಶೆಟ್ಟಿ, ಶರಣರಾದ ಅಲ್ಲಮಪ್ರಭು ಹಾಗೂ ಬಿಬ್ಬಿ ಬಾಚಯ್ಯ ಕುರಿತು ಉಪನ್ಯಾಸ ನೀಡಿ, ಸತ್ಯ ಶುದ್ಧ ಕಾಯಕ ಮಾಡುತ್ತಿದ್ದ ಶರಣರು ಅದರಲ್ಲಿ ಉಳಿದ ಗಳಿಕೆಯನ್ನು ದಾಸೋಹಕ್ಕೆ ವಿನಿಯೋಗಿಸುತ್ತಿದ್ದರು ಎಂದು ತಿಳಿಸಿದರು.
ಬಸವ ಶಿವಯೋಗ ಸಮಿತಿ ಅಧ್ಯಕ್ಷರಾದ ಸಂಗಣ್ಣ ಟೆಂಗಿನಕಾಯಿ ಅಧ್ಯಕ್ಷತೆ ವಹಿಸಿದ್ದರು. ಆರ್‌ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶೇಖರಗೌಡ ಉಳ್ಳಾಗಡ್ದಿ, ಬಸವರಾಜ ಗುಳಗುಳಿ, ತಾಲೂಕು ಪ್ರಾ.ಶಾ. ಶಿಕ್ಷಕರ ಸಂಘದ ಅಧ್ಯಕ್ಷ ಸಿದ್ಧಲಿಂಗಪ್ಪ ಶ್ಯಾಗೋಟಿ, ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ಕುರಿ, ಗುತ್ತಿಗೆದಾರ ಶರಣೇಶ ಉಳ್ಳಾಗಡ್ಡಿ ಇತರರಿದ್ದರು.