ಬಿಸರಳ್ಳಿ ಗ್ರಾಮದ ಶ್ರೀಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಸೋಮಶಂಕರ ಸ್ವಾಮೀಜಿ, ಸಿದ್ಧೇಶ್ವರ ಸ್ವಾಮೀಜಿ, ಹಿರೇಶಾಂತವೀರ ಸ್ವಾಮೀಜಿ, ಶಿವಶಾಂತವೀರ ಸ್ವಾಮೀಜಿ, ಅಭಿನವ ನಾಗಭೂಷಣ ಸ್ವಾಮೀಜಿ ಇತರರಿದ್ದರು.
- ಕೊಟ್ಟೂರು
- ಉತ್ತಂಗಿ
- ಆಶೀರ್ವಚನ
ಶರಣರ ಆದರ್ಶಗಳನ್ನು ಅಳವಡಿಸಿಕೊಂಡಲ್ಲಿ ಸಮಾಜವನ್ನು ಸನ್ಮಾರ್ಗದತ್ತ ಕೊಂಡೊಯ್ಯಬಹುದು ಎಂದು ಕೊಟ್ಟೂರು ಉತ್ತಂಗಿ ಪೀಠದ ಸೋಮಶಂಕರ ಸ್ವಾಮೀಜಿ ತಿಳಿಸಿದರು.
ಬಿಸರಳ್ಳಿ ಗ್ರಾಮದ ಶ್ರೀ ಗವಿಸಿದ್ಧೇಶ್ವರ ಶಾಖಾ ಮಠದಲ್ಲಿ ಶಿವಶಾಂತವೀರ ಸ್ವಾಮೀಜಿ ಹಾಗೂ ಮರಿಶಾಂತವೀರ ಮಹಾಶಿವಯೋಗಿಗಳ ಪುಣ್ಯಸ್ಮರಣೋತ್ಸವ ಅಂಗವಾಗಿ ಆಯೋಜಿಸಿದ್ದ ಶ್ರೀ ಗವಿಸಿದ್ಧೇಶ್ವರ ಪುರಾಣ ಪ್ರವಚನ ಕಾರ್ಯಕ್ರಮದ ಧಾರ್ಮಿಕ ಸಭೆಯಲ್ಲಿ ಸೋಮವಾರ ಮಾತನಾಡಿದರು.
ಶರಣರ ತತ್ವಗಳು ಸಮಾಜಕ್ಕೆ ದಾರಿದೀಪವಾಗಿವೆ. ಇಂದಿನ ಸಮಾಜದಲ್ಲಿ ಮಾನವೀಯ ಮೌಲ್ಯಗಳು, ಸಂಸ್ಕಾರ ಮತ್ತು ಧಾರ್ಮಿಕ ಚಿಂತನೆಗಳನ್ನು ಉಳಿಸಿಕೊಳ್ಳುವ ಅಗತ್ಯ ಹೆಚ್ಚಾಗಿದೆ. ಪುರಾಣ ಪ್ರವಚನಗಳು ಕೇವಲ ಧಾರ್ಮಿಕ ಕಾರ್ಯಕ್ರಮಗಳಲ್ಲ ಅವು ಬದುಕಿನ ಮೌಲ್ಯಗಳನ್ನು ಬೋಧಿಸುವ ಜ್ಞಾನ ಯಜ್ಞಗಳಾಗಿವೆ. ಇಂತಹ ಕಾರ್ಯಕ್ರಮಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರಿಸಿಕೊಂಡು ಹೋಗಬೇಕು ಎಂದರು.
ಕಂಪಸಾಗರದ ಅಭಿನವ ನಾಗಭೂಷಣ ದೇಶೀಕರು ಮಾತನಾಡಿ, ಪುರಾಣ ಪ್ರವಚನಗಳು ಭಕ್ತರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಜತೆಗೆ ನೈತಿಕ ಬದುಕಿನತ್ತ ಪ್ರೇರೇಪಿಸುತ್ತಿವೆ ಎಂದರು. ಮೈನಳ್ಳಿ-ಬಿಕನಳ್ಳಿಯ ಸಿದ್ಧೇಶ್ವರ ಸ್ವಾಮೀಜಿ, ಹಡಗಲಿಯ ಹಿರೇಶಾಂತವೀರ ಸ್ವಾಮೀಜಿ, ಬಿಸರಳ್ಳಿಯ ಶಿವಶಾಂತವೀರ ಸ್ವಾಮೀಜಿ, ಪ್ರವಚನಕಾರ ಶರಣಬಸವ ಶಾಸ್ತ್ರಿ, ಕಲಾವಿದರಾದ ಮನೋಜಕುಮಾರ ಇತರರಿದ್ದರು.